ನವದೆಹಲಿ: ಕೊರೊನಾ ಭೀತಿ ಹಿನ್ನೆಲೆ ರಾಜ್ಯ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕಾಂಗ್ರೆಸ್ನ ಹಿರಿಯ ನಾಯಕ ಶಶಿ ತರೂರ್ ಅವರು ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರನ್ನು ಮತ್ತೊಮ್ಮೆ ಒತ್ತಾಯಿಸಿದ್ದಾರೆ.
ಸಾಂಕ್ರಾಮಿಕ ರೋಗದ ಈ ಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳು ಒತ್ತಡದಿಂದ ಮುಕ್ತರಾಗಲೆಂದು, ರಾಜ್ಯ ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ಮುಂದೂಡಿ ಆದೇಶ ನೀಡುವಂತೆ ತರೂರ್ ರಾಜ್ಯ ಸರ್ಕಾರವನ್ನು ಪದೇ ಪದೇ ಒತ್ತಾಯಿಸುತ್ತಿದ್ದಾರೆ.
ಕೇರಳ ವಿಶ್ವವಿದ್ಯಾಲಯ, ಕೇರಳ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಂತಹ ಆಡಳಿತ ಮಂಡಳಿಯು ತೆಗೆದುಕೊಂಡ ನಿರ್ಧಾರದಿಂದ ವಿದ್ಯಾರ್ಥಿಗಳು ಕೋಪಗೊಂಡಿದ್ದು, ಈ ವಾರದಲ್ಲಿ ಸುಮಾರು 3.5000ಕ್ಕೂ ಹೆಚ್ಚು ಇಮೇಲ್ಗಳನ್ನು ಸ್ವೀಕರಿಸಲಾಗಿದೆ ಎಂದು ತರೂರ್ ಕೇರಳದ ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಮನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಬರುವಾಗ ಸೋಂಕು ತಗುಲಬಹುದು. ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಪೋಷಕರು ಮತ್ತು ವಯಸ್ಸಾದವರ ಜೊತೆ ಇರುವುದರಿಂದ ಅವರಿಗೂ ಸೋಂಕು ಹಬ್ಬುವ ಸಾಧ್ಯತೆ ಇದೆ ಎಂದು ತರೂರ್ ಹೇಳಿದ್ದಾರೆ.