ಮುಂಬೈ (ಮಹಾರಾಷ್ಟ್ರ) : ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ವೃತ್ತಿಪರ ಕೋರ್ಸ್‌ಗಳ ಅಂತಿಮ ವರ್ಷ ಅಥವಾ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಸಂಬಂಧಿತ ಉನ್ನತ ಸಂಸ್ಥೆಗಳಿಗೆ ಸೂಚನೆ ನೀಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಜೂನ್ 25ರಂದು ಮೋದಿಗೆ ಪತ್ರ ಬರೆದಿರುವ ಮಹಾರಾಷ್ಟ್ರ ಸಿಎಂ, ಪ್ರಸ್ತುತ ಕೋವಿಡ್-19 ಪರಿಸ್ಥಿತಿಯನ್ನು ಪರಿಗಣಿಸಿ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜೂನ್ 18ರಂದು ನಡೆದ ಸಭೆಯಲ್ಲಿ ವೃತ್ತಿಪರರಲ್ಲದ ಮತ್ತು ವೃತ್ತಿಪರ ಕೋರ್ಸ್‌ಗಳ ಅಂತಿಮ ವರ್ಷ ಅಥವಾ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸದಿರಲು ನಿರ್ಧರಿಸಿದೆ. ವಿಶ್ವವಿದ್ಯಾಲಯಗಳು ನಿರ್ಧರಿಸಿದ ಸೂತ್ರದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡುತ್ತವೆ ಎಂದಿದ್ದಾರೆ.
'ವೃತ್ತಿಪರ ಕೋರ್ಸ್‌ಗಳ ಅಂತಿಮ ವರ್ಷ ಅಥವಾ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸುವ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರವನ್ನು ಅನುಮೋದಿಸಲು, ವಿಶ್ವವಿದ್ಯಾಲಯಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡುವಂತೆ ರಾಷ್ಟ್ರಮಟ್ಟದ ಉನ್ನತ ಸಂಸ್ಥೆಗಳಿಗೆ ಸೂಚಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ' ಎಂದಿದ್ದಾರೆ.
ಈ ಉನ್ನತ ಸಂಸ್ಥೆಗಳಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ), ಕೌನ್ಸಿಲ್ ಫಾರ್ ಆರ್ಕಿಟೆಕ್ಚರ್ (ಸಿಒಎ), ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ), ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ), ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ), ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಕ್ಯಾಟರಿಂಗ್ ಟೆಕ್ನಾಲಜಿ (ಎನ್‌ಸಿಎಚ್‌ಎಂಸಿಟಿ).
2019-20ನೇ ಶೈಕ್ಷಣಿಕ ವರ್ಷದ ಅಂತಿಮ ವರ್ಷ ಅಥವಾ ಸೆಮಿಸ್ಟರ್ ಪರೀಕ್ಷೆಗಳ ಬಗ್ಗೆ ಮತ್ತು ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಕಳವಳಗೊಂಡಿದ್ದಾರೆ ಎಂದು ಠಾಕ್ರೆ ಹೇಳಿದ್ದಾರೆ.