ಅಮರಾವತಿ: ಆಂಧ್ರಪ್ರದೇಶ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿರುವ ನಟ, ರಾಜಕಾರಣಿ ಪವನ್ ಕಲ್ಯಾಣ್ ವಿಧಾನಸಭೆ ಚುನಾವಣೆಗೆ ಗಾಜುವಾಕಾ ಹಾಗೂ ಭೀಮಾವರಂ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಏಪ್ರಿಲ್ 11ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಆಂಧ್ರ ರಾಜಕಾರಣದಲ್ಲಿ ಪವನ್ ತಮ್ಮದೇ ಛಾಪು ಮೂಡಿಸಿದ್ದು, ಜನಸೇನಾ ಪಕ್ಷದ ಮೂಲಕ ರಾಜಕೀಯದಲ್ಲೂ ಸೈ ಎನಿಸಿಕೊಳ್ಳಲು ಭರ್ಜರಿ ಪ್ರಚಾರವನ್ನೇ ನಡೆಸುತ್ತಿದ್ದಾರೆ.
ಪವನ್ ಸ್ಪರ್ಧಿಸುತ್ತಿರುವ ಗಾಜುವಾಕಾ ವಿಶಾಖಪಟ್ಟಣಂನಲ್ಲಿದ್ದು, ಭೀಮಾವರಂ ಪಶ್ಚಿಮ ಗೋದಾವರಿಯಲ್ಲಿದೆ. ಲೋಕಸಭೆ ಚುನಾವಣೆಗೂ ಪವನ್ರ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಬಹುಜನ ಸಮಾಜವಾದಿ ಪಕ್ಷ, ಸಿಪಿಐ ಹಾಗೂ ಸಿಪಿಐ (ಎಂ) ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಸೀಟು ಹಂಚಿಕೆ ಪ್ರಕ್ರಿಯೆಯಂತೆ ಜನಸೇನೆಯಿಂದ ವಿಧಾನಸಭೆಗೆ 140 ಹಾಗೂ ಲೋಕಸಭೆಗೆ 18 ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದಾರೆ. ಈಗಾಗಲೇ ವಿಧಾನಸಭೆಗೆ 77 ಹಾಗೂ ಲೋಕಸಭೆಗೆ 9 ಅಭ್ಯರ್ಥಿಗಳ ಘೋಷಣೆಯೂ ಆಗಿದೆ.
ಮಾಯಾವತಿ ಪ್ರಧಾನಿಯಾಬೇಕೆಂಬ ಆಶಯವನ್ನು ಪವನ್ ಕಲ್ಯಾಣ್ ವ್ಯಕ್ತಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಪವನ್ ಕಲ್ಯಾಣ್ ಆಂಧ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಅವರ ಈ ರಾಜಕೀಯ ಯಾತ್ರೆ ಅಣ್ಣ ಪ್ರಜಾರಾಜ್ಯಂನಂತೆ ಆಗುತ್ತಾ ಇಲ್ಲವೇ ಅಧಿಕಾರದ ಚುಕ್ಕಾಣಿ ಹಿಡಿದು ಪವರ್ ತೋರಿಸುತ್ತಾ ಅನ್ನೋದು ಫಲಿತಾಂಶದ ಬಳಿಕವೇ ಸ್ಪಷ್ಟವಾಗಲಿದೆ.