ಹೈದರಾಬಾದ್: ಈ ವರ್ಷ ಬೊನಾಲು ಹಬ್ಬವನ್ನು ಸರಳವಾಗಿ ದೇವಾಲಯದ ಒಳಗಡೆಯೇ ಎಂದಿನ ಪದ್ಧತಿಯಂತೆ ಆಚರಿಸಬೇಕು ಹಾಗೂ ಜನರು ಮನೆಯಲ್ಲೇ ಹಬ್ಬವನ್ನ ಆಚರಿಸಿ, ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ತೆಲಂಗಾಣ ಸರ್ಕಾರ ಮನವಿ ಮಾಡಿದೆ.
ಪ್ರತಿ ವರ್ಷ ರಾಜ್ಯ ಸರ್ಕಾರವು ಈ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತದೆ. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ನಂತರ ಈ ಹಬ್ಬವನ್ನು ರಾಜ್ಯ ಹಬ್ಬವೆಂದು ತೆಲಂಗಾಣ ಸರ್ಕಾರ ಘೋಷಣೆ ಮಾಡಿತ್ತು. ಹಾಗೆಯೇ ಕಳೆದ ವರ್ಷ ರಾಜ್ಯ ಸರ್ಕಾರ ಉತ್ಸವ ನಡೆಸಲು 15 ಕೋಟಿ ರೂ ಬಿಡುಗಡೆ ಮಾಡಿತ್ತು.
COVID-19 ಹರಡಿದ್ದರಿಂದ ಮೆರವಣಿಗೆ ಮತ್ತು ಸಭೆಗಳಿಗೆ ಅವಕಾಶ ನೀಡದಂತೆ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿವೆ. ಹೈದರಾಬಾದ್ ಮತ್ತು ರಂಗಾರೆಡ್ಡಿ ಜಿಲ್ಲೆಗಳ 3,020 ದೇವಾಲಯಗಳಲ್ಲಿ ಬೊನಾಲು ಹಬ್ಬವನ್ನು ಪ್ರತಿವರ್ಷ ಆಚರಿಸಲಾಗುತ್ತದೆ.
ಆದರೆ, ದುರಾದೃಷ್ಟವಶಾತ್ ಕೋವಿಡ್-19 ಈ ವರ್ಷ ಸರ್ಕಾರ ಮತ್ತು ಸಂಘಟಕರ ಯೋಜನೆಗಳನ್ನು ಬದಲಾಯಿಸಿದೆ. ದೇವರಿಗೆ ಬೋನಂ ಅನ್ನು ಆಯಾ ಮನೆಗಳಲ್ಲಿ ಅರ್ಪಿಸಬೇಕು ಮತ್ತು ದೇವಾಲಯಗಳಿಗೆ ಬರಬಾರದು ಎಂದು ಜನರಿಗೆ ಇದೇ ವೇಳೆ ತೆಲಂಗಾಣ ಸರ್ಕಾರ ಮನವಿ ಮಾಡಿದೆ.
ಇನ್ನು ತಮ್ಮ ಸುರಕ್ಷತೆಗಾಗಿ ಮತ್ತು ಸಮುದಾಯದ ಹಿತದೃಷ್ಟಿಯಿಂದ ಆಚರಣೆಗಳು ಮತ್ತು ಪದ್ಧತಿಗಳ ಪ್ರಕಾರ ಹಬ್ಬವನ್ನು ತಮ್ಮ ಮನೆಗಳೊಳಗೆ ಆಚರಿಸುವ ಮೂಲಕ ಸರ್ಕಾರದೊಂದಿಗೆ ಸಹಕರಿಸುವಂತೆ ಎಲ್ಲ ಸಮಿತಿ ಸದಸ್ಯರು ಮತ್ತು ಇತರ ಅಧಿಕಾರಿಗಳಿಗೆ ಗೃಹ ಸಚಿವರು ಮನವಿ ಮಾಡಿದ್ದಾರೆ.