ಹೈದರಾಬಾದ್: ಲಾಕ್ಡೌನ್ ವೇಳೆಯಲ್ಲಿ ಮನೆಯಿಂದ ಹೊರಗೆ ಸಿಲುಕಿಕೊಂಡಿದ್ದವರಿಗೆ ಮನೆಗೆ ಮರಳಲು ಕೇಂದ್ರ ಸರ್ಕಾರ ಯೋಜನೆ ಘೋಷಿಸಿದ ನಂತರ, ತೆಲಂಗಾಣ ಸರ್ಕಾರ ತಮ್ಮ ರಾಜ್ಯದಲ್ಲಿ ಸಿಲುಕಿಕೊಂಡಿರುವ ಹೊರ ರಾಜ್ಯದವರನ್ನು ವಾಪಸ್ ಕಳುಹಿಸಲು ಬುಧವಾರ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ.
ಲಾಕ್ಡೌನ್ ವೇಳೆ ಸಿಲುಕಿಕೊಂಡಿರುವವರ ಬಗ್ಗೆ ಮಾಹಿತಿ ಪಡೆಯಲು ನೋಡಲ್ ಅಧಿಕಾರಿಯಾಗಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಸಂದೀಪ್ ಕುಮಾರ್ ಸುಲ್ತಾನಿಯಾ ಅವರನ್ನು ನೋಡಲ್ ಅಧಿಕಾರಿಯಾಗಿ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಜಿತೇಂದರ್ ಅವರನ್ನು ಪೊಲೀಸ್ ನೋಡಲ್ ಅಧಿಕಾರಿಯಾಗಿ ಸರ್ಕಾರ ನೇಮಿಸಿದೆ.
ಈ ಬಗ್ಗೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಮಾತನಾಡಿದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್, ರಾಜ್ಯದಲ್ಲಿ ಸಿಲುಕಿಕೊಂಡಿರುವವರನ್ನು ಮರಳಿ ಅವರ ಊರುಗಳಿಗೆ ಕಳುಹಿಸಲು ಈಗಾಗಲೇ ಪ್ರಮಾಣಿತ ಪ್ರೋಟೋಕಾಲ್ ಸಿದ್ಧಪಡಿಸಲಾಗಿದ್ದು, ಈ ಪ್ರಕ್ರಿಯೆಗೆ ಅಧಿಕಾರಿಗಳು ನೋಡಲ್ ಪ್ರಾಧಿಕಾರದೊಂದಿಗೆ ಸಹಕರಿಸಲಿದ್ದಾರೆ ಎಂದರು.
ಈಗಾಗಲೇ ಲಾಕ್ಡೌನ್ ವೇಳೆ ಸಿಲುಕಿಕೊಂಡಿರುವವರ ವಿವರಗಳನ್ನು ಕಳುಹಿಸಲು ತೆಲಂಗಾಣ ಸರ್ಕಾರ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರಗಳನ್ನು ಕಳುಹಿಸಲಾಗಿದ್ದು, ಅವರಿಗೆ ಸಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದರು. ಹಾಗೆ ಎಲ್ಲಾ ರಾಜ್ಯಗಳ ಅಧಿಕಾರಿಗಳು ತೆಲಂಗಾಣದ ನೋಡಲ್ ಪ್ರಾಧಿಕಾರದೊಂದಿಗೆ ಸಮನ್ವಯ ಸಾಧಿಸುವಂತೆ ಕೋರಿದರು.
ಅಲ್ಲದೇ ತೆಲಂಗಾಣದಲ್ಲಿ ಸಿಲುಕಿ ಮನೆಗೆ ಹಿಂತಿರುಗಲು ಬಯಸುವವರನ್ನು ಕೊವಿಡ್-19 ತಪಾಸಣೆ ನಡೆಸಿ, ಕೊರೊನಾ ರೋಗ ಲಕ್ಷಣ ಇಲ್ಲದಂತಹವರಿಗೆ ತೆಲಂಗಾಣ ನೋಡಲ್ ಪ್ರಾಧಿಕಾರ ಪಾಸ್ ನೀಡುವುದಾಗಿ ಹೇಳಿದ್ದಾರೆ.