ಪಾಟ್ನಾ (ಬಿಹಾರ) : ಆರ್ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಅಶ್ವಿನಿ ಚೌಬೆ, ಅವರಿಗೆ ‘ಕ್ಯಾಬಿನೆಟ್’ ಪದವನ್ನು ಸರಿಯಾಗಿ ಉಚ್ಛರಿಸಲು ಸಾಧ್ಯವಿಲ್ಲ. ಸಮಸ್ಯೆಯನ್ನು ಅರ್ಥಮಾಡಿಕೊಳ್ಳದ ಮತ್ತು 10 ನೇ ತರಗತಿ ಪರೀಕ್ಷೆಯನ್ನೂ ಕೂಡಾ ಪಾಸು ಮಾಡಲು ಸಾಧ್ಯವಾಗದ ವ್ಯಕ್ತಿ ಯಾದವ್. ಆದರೆ ನಿತೀಶ್ ಕುಮಾರ್ ಓರ್ವ ಅರ್ಹ ಎಂಜಿನಿಯರ್ ಎಂದು ಹೇಳಿದರು.
ಇದೇ ವೇಳೆ ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ಸಮಸ್ಯೆಗಳಿವೆ. ಸಣ್ಣ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಡಿಪಿ ಕುಸಿಯುತ್ತಿದೆ. ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬಿಹಾರದ ಜನ ಬಡವರಾಗಿದ್ದಾರೆ. ಜನ ಶಿಕ್ಷಣ, ಉದ್ಯೋಗ ಮತ್ತು ವೈದ್ಯಕೀಯ ಸಹಾಯಕ್ಕಾಗಿ ವಲಸೆ ಹೋಗುತ್ತಿದ್ದಾರೆ ಎಂದು ಹೇಳಿದರು.
ಬಿಹಾರದಲ್ಲಿ ಬಿಜೆಪಿಯ ಕೋವಿಡ್ -19 ಲಸಿಕೆ ಭರವಸೆ, ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ತೀರ್ಪು ನೀಡಿರುವ ಭಾರತದ ಚುನಾವಣಾ ಆಯೋಗದ ನಿರ್ಧಾರಕ್ಕೂ ಚೌಬೆ ಪ್ರತಿಕ್ರಿಯಿಸಿದ್ದಾರೆ. ನಾವು ಆಯುಷ್ಮಾನ್ ಭಾರತ್ ಯೋಜನೆ ನೀಡಿದ್ದೇವೆ. ಕೋವಿಡ್ ಲಸಿಕೆ 3 ನೇ ಹಂತದಲ್ಲಿದೆ ಮತ್ತು ಎಲ್ಲವೂ ಸರಿಯಾಗಿ ನಡೆದರೆ ನಾವು ಔಷಧಿಯನ್ನು ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿದರು.