ಕಳೆದ ವರ್ಷ ಮಿ ಟೂ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿ ಮಾಡಿತ್ತು. ಟಾಲಿವುಡ್, ಬಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಚಿತ್ರರಂಗದ ನಟಿಯರು ತಮಗಾದ ಅನುಭವವನ್ನು ಮೀಡಿಯಾ ಮುಂದೆ ಹೇಳಿಕೊಂಡಿದ್ದರು. ಇದೀಗ ಈ ಪ್ರಕರಣದ ಕಾವು ಸ್ವಲ್ಪ ತಣ್ಣಗಾಗಿದೆ.
ಬಾಲಿವುಡ್ ನಟಿ ತನುಶ್ರೀ ದತ್ತಾ ಕೂಡಾ ತನಗೆ ದೊಡ್ಡ ನಟನೊಬ್ಬರಿಂದ ಲೈಂಗಿಕ ಕಿರುಕುಳವಾಗಿದೆ ಎಂದು ಖ್ಯಾತ ನಟ ನಾನಾ ಪಾಟೇಕರ್ನತ್ತ ಬೊಟ್ಟು ಮಾಡಿದ್ದರು. 2008 ರಲ್ಲಿ ಚಿತ್ರವೊಂದರ ಹಾಡಿನ ಚಿತ್ರೀಕರಣದ ವೇಳೆ ನಾನಾ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ತನುಶ್ರೀ ಆರೋಪಿಸಿದಾಗ ನಾನಾ ಅಭಿಮಾನಿಗಳು ತನುಶ್ರೀ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೇಗೋ ನಾನಾ ಮೇಲೆ ಕೇಸ್ ಕೂಡಾ ದಾಖಲಾಯಿತು. ಇದೀಗ ವಿಚಾರಣೆ ಕೂಡಾ ನಡೆಯುತ್ತಿದೆ.
ಆದರೆ, ವಿಚಾರಣೆ ನಡೆಸಿದ ಪೊಲೀಸರು ಸಾಕ್ಷಿಗಳ ಹೇಳಿಕೆ ನಾನಾ ಪಾಟೇಕರ್ ತಪ್ಪು ಮಾಡಿದ್ದರೆಂದು ಪ್ರೂವ್ ಮಾಡುವಷ್ಟ ಬಲವಾಗಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ನಾನಾಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ತನುಶ್ರೀ ದತ್ತಾ 'ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ವಿಚಾರಣೆ ನಡೆಯುತ್ತಿದೆ. ನಾನಾ ಪಾಟೇಕರ್ ತನಗೆ ಕ್ಲೀನ್ಚಿಟ್ ಸಿಕ್ಕಿದೆ ಎಂದು ಇಲ್ಲಸಲ್ಲದ ರೂಮರ್ಸ್ ಹಬ್ಬಿಸುತ್ತಿದ್ದಾರೆ, ಮುಂಬೈ ಪೊಲೀಸರು ಆ ರೀತಿ ಹೇಳಿಕೆ ಕೂಡಾ ನೀಡಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.