ಚೆನ್ನೈ: ರಮ್ಮಿ ಮತ್ತು ಇತರ ಆನ್‌ಲೈನ್ ಆಟಗಳನ್ನು ನಿಷೇಧಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಹೇಳಿದ್ದಾರೆ.
ಕೊಯಮತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನ್‌ಲೈನ್ ರಮ್ಮಿಯಿಂದಾಗಿ ಅನೇಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಚಾರ ಗಣನೆಗೆ ತೆಗೆದುಕೊಂಡು, ಹಣ ಹೂಡಿ ಆಡುವ ಆನ್‌ಲೈನ್ ಆಟಗಳನ್ನು ನಿಷೇಧಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದಿದ್ದಾರೆ.
ಅಂತಹ ಆನ್‌ಲೈನ್ ಆಟಗಳನ್ನು ಆಯೋಜಿಸುವವರನ್ನು ಮತ್ತು ಭಾಗವಹಿಸುವವರನ್ನು ಅಪರಾಧಿಗಳೆಂದು ಪರಿಗಣಿಸಿ ಜೈಲು ಶಿಕ್ಷೆ ವಿಧಿಸುವ ರೀತಿಯಲ್ಲಿ ಕಾನೂನು ರೂಪಿಸಲಾಗುವುದು ಎಂದು ಪಳನಿಸ್ವಾಮಿ ಹೇಳಿದರು.
ಇಂಟರ್ನೆಟ್ ಬಳಕೆ ಬಹಳ ವೇಗವಾಗಿ ಹರಡುತ್ತಿರುವ ಸಮಯದಲ್ಲಿ ಕೆಲವು ಜನರು, ವಿಶೇಷವಾಗಿ ಯುವಕರು ಆನ್‌ಲೈನ್ ರಮ್ಮಿ ಆಡುವ ಮೂಲಕ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದು ಕೆಲವೊಮ್ಮೆ ಅವರ ಆತ್ಮಹತ್ಯೆಗೆ ಕಾರಣವಾಗುತ್ತದೆ ಎಂದು ಪಳನಿಸ್ವಾಮಿ ಹೇಳಿದ್ದಾರೆ.