ಚೆನ್ನೈ: ಮಹಾಮಾರಿ ಕೊರೊನಾ ಸೋಂಕಿಗೆ ಮತ್ತೋರ್ವ ರಾಜಕಾರಣಿ ಬಲಿಯಾಗಿದ್ದಾರೆ. ಕೋವಿಡ್ ದೃಢಪಟ್ಟ ನಂತರ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಕೃಷಿ ಸಚಿವ ಆರ್. ದೊರೈಕ್ಕಣ್ಣು ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
72 ವರ್ಷದ ದೊರೈಕ್ಕಣ್ಣು ತೀವ್ರ ಉಸಿರಾಟದ ತೊಂದರೆ ಕಾರಣ ಅಕ್ಟೋಬರ್ 13ರಂದು ಇಲ್ಲಿನ ಕಾವೇರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕಳೆದ ಕೆಲ ದಿನಗಳಿಂದ ವೆಂಟಿಲೇಟರ್ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಕೃಷಿ ಸಚಿವರ ನಿಧನಕ್ಕೆ ತಮಿಳುನಾಡಿನ ರಾಜ್ಯಪಾಲ ಬನ್ವರಿಲಾಲ್ ಸಂತಾಪ ಸೂಚಿಸಿದ್ದು, ಅವರ ನಿಧನದ ಸುದ್ದಿ ತಿಳಿದು ಬೇಸರವಾಗಿದೆ ಎಂದಿದ್ದಾರೆ. ಸರಳತೆ, ನೇರ ಮಾತು ಹಾಗೂ ಆಡಳಿತ ಕೌಶಲ್ಯದಿಂದ ಹೆಚ್ಚು ಜನರ ಪ್ರೀತಿ ಗಳಿಸಿದ್ದ ದೊರೈಕ್ಕಣ್ಣು ಕೃಷಿ ಸಚಿವಾಲಯದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. 2006, 2011 ಮತ್ತು 2016 ರಲ್ಲಿ ತಂಜಾವೂರು ಜಿಲ್ಲೆಯ ಪಾಪನಾಸಂನಿಂದ ತಮಿಳುನಾಡು ವಿಧಾನಸಭೆಗೆ ಇವರು ಆಯ್ಕೆಯಾಗಿದ್ದರು. 2016ರಿಂದ ತಮಿಳುನಾಡು ಸಚಿವ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು.