ಲಕ್ನೊ: ಮಾ.13 ರಿಂದ 15 ರವರೆಗೆ ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ತಬ್ಲೀಘಿ ಜಮಾತ್ನಲ್ಲಿ ಉತ್ತರ ಪ್ರದೇಶದ 18 ಜಿಲ್ಲೆಗಳ ಜನ ಪಾಲ್ಗೊಂಡಿದ್ದರು ಎಂಬ ಆಘಾತಕಾರಿ ವರದಿಗಳ ಹಿನ್ನೆಲೆಯಲ್ಲಿ ಈ ಎಲ್ಲ 18 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ತಬ್ಲೀಘಿ ಜಮಾತ್ನಲ್ಲಿ ದೇಶ ವಿದೇಶಗಳ ಸುಮಾರು 2000 ಸಾವಿರ ಜನ ಭಾಗವಹಿಸಿದ್ದು, ಇವರಲ್ಲಿ ಅನೇಕರಿಗೆ ಕೋವಿಡ್-19 ಸೋಂಕು ತಗುಲಿದ್ದು ದೃಢಪಟ್ಟಿದೆ.
ನಿಜಾಮುದ್ದೀನ್ನಲ್ಲಿ ನಡೆದ ತಬ್ಲೀಘಿ ಜಮಾತ್ ಮುಸ್ಲಿಂ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿ ಮರಳಿದ್ದ ತೆಲಂಗಾಣದ 6 ಜನ ಈಗಾಗಲೇ ಕೋವಿಡ್ನಿಂದ ಮೃತ ಪಟ್ಟಿರುವುದರಿಂದ ಎಲ್ಲೆಡೆ ಭೀತಿ ಆವರಿಸುವಂತಾಗಿದೆ.
ಹೈ ಅಲರ್ಟ್ ಘೋಷಿಸಲಾಗಿರುವ 18 ಜಿಲ್ಲೆಗಳಿಂದ ಯಾರ್ಯಾರು ತಬ್ಲೀಘಿ ಜಮಾತ್ನಲ್ಲಿ ಭಾಗವಹಿಸಿದ್ದರು ಎಂಬುದನ್ನು ತಕ್ಷಣ ಪತ್ತೆ ಮಾಡುವಂತೆ ಆಯಾ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಈ ಕುರಿತು ಮಂಗಳವಾರ ಸಂಜೆಯೊಳಗೆ ವರದಿ ನೀಡುವಂತೆ ನಿರ್ದೇಶಿಸಲಾಗಿದೆ ಎಂದು ಕ್ರೈಂ ವಿಭಾಗದ ಎಸ್ಪಿ ಅಜಯ್ ಶಂಕರ ರಾಯ್ ತಿಳಿಸಿದ್ದಾರೆ.
ಗಾಜಿಯಾಬಾದ್, ಮೀರತ್, ಸಹಾರನ್ಪುರ, ಮುಜಪ್ಫರ್ ನಗರ, ಶಾಮ್ಲಿ, ಹಾಪುರ್, ಬಿಜ್ನೋರ್, ಬಾಗಪತ್, ವಾರಣಾಸಿ, ಭದೋಹಿ, ಮಥುರಾ, ಆಗ್ರಾ, ಸೀತಾಪುರ, ಬಾರಾಬಂಕಿ, ಪ್ರಯಾಗರಾಜ್, ಗೊಂಡಾ ಹಾಗೂ ಬಲರಾಂಪುರ್ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ತಬ್ಲೀಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದವರ ಸಂಪೂರ್ಣ ಪಟ್ಟಿಯನ್ನು ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಪಡೆದುಕೊಂಡಿದ್ದು, ಇದರಲ್ಲಿ ಸುಮಾರು 250 ಜನ ಕೋವಿಡ್-19 ಸೋಂಕಿನ ಲಕ್ಷಣಗಳನ್ನು ಹೊಂದಿದ್ದಾರೆ.
"ಈ ಪ್ರಕರಣವನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಜಮಾತ್ನಲ್ಲಿ ಪಾಲ್ಗೊಂಡವರನ್ನು ಹುಡುಕುತ್ತಿದ್ದೇವೆ. ಈ ಒಂದು ಘಟನೆಯಿಂದ ರಾಜ್ಯದಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಎಲ್ಲರಿಗೂ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ" ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.