ನವದೆಹಲಿ: ಸ್ವದೇಶಿ ಎಂದರೆ ಎಲ್ಲಾ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸುವುದು ಎಂದರ್ಥವಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ನಾವು ನಿಗದಿಪಡಿಸಿದ ಷರತ್ತುಗಳ ಮೇಲೆ, ನಮಗೆ ಸೂಕ್ತವಾದದ್ದನ್ನು ನಾವು ಖರೀದಿಸುತ್ತೇವೆ ಎನ್ನುವ ಮೂಲಕ ಎಲ್ಲ ವಿದೇಶೀ ವಸ್ತುಗಳನ್ನ ವಿರೋಧಿಸುವುದು ಸೂಕ್ತ ಅಲ್ಲ ಎಂಬ ನಿಲುವನ್ನ ಭಾಗವತ್ ಹೊಂದಿದ್ದಾರೆ.
"ಸ್ವದೇಶಿ ಎಂದರೆ ಪ್ರತಿ ವಿದೇಶಿ ಉತ್ಪನ್ನವನ್ನು ಬಹಿಷ್ಕರಿಸುವುದು ಎಂದರ್ಥವಲ್ಲ. ನಮಗೆ ಸೂಕ್ತವಾದದ್ದನ್ನು ನಾವು ಖರೀದಿಸುತ್ತೇವೆ. ಅದೂ ಸಹ ನಾವು ನಿಗದಿಪಡಿಸಿದ ಷರತ್ತುಗಳ ಮೇರೆಗೆ ಎಂಬುದನ್ನ ಮರೆಯಬಾರದು ಎಂದಿರುವ ಅವರು, ಪ್ರಪಂಚದಾದ್ಯಂತ ನಮಗೆ ಯಾವುದು ಒಳ್ಳೆಯದು ಇದೆಯೋ ಅದನ್ನ ನಾವು ತೆಗೆದುಕೊಳ್ಳುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉದಾತ್ತ ಆಲೋಚನೆಗಳು ಎಲ್ಲ ದಿಕ್ಕುಗಳಿಂದಲೂ ನಮ್ಮ ಬಳಿಗೆ ಬರಲಿ ಎಂಬ ಮಾತನ್ನೂ ಅವರು ಇದೇ ವೇಳೆ ಹೇಳಿದ್ದಾರೆ. ಆದರೆ ನಾವು ಹೊರಗಿನಿಂದ ತೆಗೆದುಕೊಳ್ಳುವ ನಿರ್ಧಾರ ಮಾತ್ರ ನಮ್ಮ ಅಗತ್ಯತೆಗಳಿಗೆ ಅನುಗುಣವಾಗಿರಬೇಕು ಎಂದಿದ್ದಾರೆ. ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ವಿದೇಶಿ ಹೂಡಿಕೆ ಮತ್ತು ಅಂತಹ ವಸ್ತುಗಳ ಭಾರಿ ಬಳಕೆಯನ್ನ ನಿರ್ಬಂಧಿಸುವ ಸ್ವದೇಶಿ ಪರಿಕಲ್ಪನೆ ಒಳ್ಳೆಯ ಅಂಶವೇ ಆಗಿದೆ ಎಂದೂ ಪ್ರತಿಪಾದಿಸಿದರು.
ಸ್ವಾವಲಂಬಿ ಮತ್ತು ಸ್ವದೇಶಿ ಎಂಬ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಮೋಹನ್ ಭಾಗವತ್, ಒಂದು ಆರ್ಥಿಕ ಮಾದರಿಯನ್ನು ಎಲ್ಲೆಡೆ ಅನ್ವಯಿಸಲು ಸಾಧ್ಯವಿಲ್ಲ ಎಂದು ಇದೇ ವೇಳೆ ಪ್ರತಿಪಾದಿಸಿದರು. ಕೊರೊನಾದಂತಹ ಈ ಸಂದರ್ಭ ನಮಗೆ ಪಾಠ ಕಲಿಸಿದ್ದು, ಜಾಗತೀಕರಣ ನಮಗೆಲ್ಲ ಅಪೇಕ್ಷಿತ ಫಲಿತಾಂಶ ನೀಡಿಲ್ಲ ಎಂದು ಹೇಳಿದರು.
ಇದೇ ವೇಳೆ, ಸ್ವಾವಲಂಬಿ ರಾಷ್ಟ್ರಗಳಲ್ಲಿ ಪರಸ್ಪರ ಸಹಕಾರದ ಅಗತ್ಯ ಇದೆ. ಎಲ್ಲರೂ ಜಗತ್ತನ್ನು "ಒಂದೇ ಕುಟುಂಬ ಮತ್ತು ಒಂದು ಮಾರುಕಟ್ಟೆ" ಎಂದು ಪರಿಗಣಿಸಬೇಕು ಎಂದು ಪ್ರತಿಪಾದನೆ ಮಾಡಿದರು.