ನವದೆಹಲಿ: ಹೃದಯಾಘಾತದಿಂದ ಮೃತರಾದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಂತ್ಯಕ್ರಿಯೆಯು ಇಂದು ಲೋದಿ ಸ್ಮಶಾನದಲ್ಲಿ ಸಂಜೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅವರ ಸಂಪುಟದ ಸಚಿವರು, ವಿವಿಧ ಪಕ್ಷದ ನಾಯಕರು, ಕುಟುಂಬ ಹಾಗೂ ಸ್ನೇಹಿತರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ಸುಷ್ಮಾ ಅವರ ಪಾರ್ಥೀವ ಶರೀರವನ್ನು ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಮೂರು ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಬಿಜಿಪಿ ಕಾರ್ಯಧ್ಯಕ್ಷ ಜೆ. ಪಿ ನಡ್ಡಾ ಹೇಳಿದ್ದಾರೆ.
ನಿನ್ನೆ ತೀವ್ರ ಹೃದಯಾಗತದಿಂದ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಗೃಹ ಸಚಿವ ರಾಜನಾಥ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ಕಾನೂನು ಸಚಿವ ರವಿಶಂಕರ್ ಪ್ರಸಾದ್, ಆರೋಗ್ಯ ಸಚಿವ ಹರ್ಷವರ್ಧನ, ಪ್ರಕಾಶ್ ಜಾವೇಡ್ಕರ್, ಕೇಂದ್ರ ಸಚಿವೆ ಸೃತಿ ಇರಾನಿ ಸೇರಿದಂತೆ ಇತರ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದರು.
ರಾತ್ರಿ ವೇಳೆಗೆ ಶವವನ್ನು ಸುಷ್ಮಾ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಕುಟುಂಬದವರು, ಸ್ನೇಹಿತರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇಂದು ಮಧ್ಯಾಹ್ನ 12ರಿಂದ 3ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಇಟ್ಟು, ಬಳಿಕ ಲೋಧಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ನಡ್ಡಾ ತಿಳಿಸಿದ್ದಾರೆ.