ಗಾಂಧಿನಗರ(ಗುಜರಾತ್): ಬರೋಬ್ಬರಿ ಆರು ತಿಂಗಳ ಬಳಿಕ ವಿಶ್ವದ ಅತೀ ದೊಡ್ಡ ಪ್ರತಿಮೆ ಎಂಬ ಕೀರ್ತಿ ಹೊಂದಿರುವ ಸ್ಟ್ಯಾಚ್ಯೂ ಆಫ್ ಯೂನಿಟಿ (ಏಕತಾ ಪ್ರತಿಮೆ) ಅಕ್ಟೋಬರ್ 17 ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.
ಗುಜರಾತ್‌ನ ನರ್ಮದಾ ದಡದಲ್ಲಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್‌ರ ಅತೀ ಎತ್ತರದ ಕಂಚಿನ ಪ್ರತಿಮೆಯನ್ನು ನವರಾತ್ರಿಯ ಶುಭದಿನದಂದು ತೆರೆಯಲು ಸರ್ದಾರ್ ಸರೋವರ್ ನರ್ಮದಾ ನಿಗಮ್ ಲಿಮಿಟೆಡ್ (ಎಸ್‌ಎಸ್‌ಎನ್‌ಎನ್‌ಎಲ್) ನಿರ್ಧರಿಸಿದೆ. ಈಗಾಗಲೇ ಅಧಿಕಾರಿಗಳು ಕೆವಾಡಿಯಾ ತಾಣದಲ್ಲಿ ಜಂಗಲ್ ಸಫಾರಿ, ಮಕ್ಕಳ ಪೌಷ್ಠಿಕಾಂಶ ಉದ್ಯಾನ, ಏಕ್ತಾ ಮಾಲ್ ಮತ್ತು ಇತರ ಪ್ರವಾಸಿ ತಾಣಗಳನ್ನು ಮತ್ತೆ ತೆರೆದಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸ್ಟ್ಯಾಚ್ಯೂ ಆಫ್ ಯೂನಿಟಿ ಪುನಾರಂಭಕ್ಕಾಗಿ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ದಿನಕ್ಕೆ 2,500 ಪ್ರವಾಸಿಗರ ಭೇಟಿಗೆ ಮಾತ್ರ ಅವಕಾಶ ನೀಡಲು ಎಸ್‌ಒಯು ಅಧಿಕಾರಿಗಳು ನಿರ್ಧರಿಸಿದ್ದಾರೆ. 193 ಮೀಟರ್ ಎತ್ತರದಲ್ಲಿರುವ ವೀಕ್ಷಣಾ ಗ್ಯಾಲರಿಗೆ ಪ್ರವೇಶಿಸಲು 500 ಜನರಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.
ಅಧಿಕೃತ ಟಿಕೆಟ್ ವೆಬ್‌ಸೈಟ್ www.soutickets.in ನಿಂದ ಎರಡು ಗಂಟೆಗಳ ಸ್ಲಾಟ್‌ಗಳಲ್ಲಿ ಟಿಕೆಟ್‌ಗಳು ಲಭ್ಯವಿರಲಿದ್ದು, ಯಾವುದೇ ಟಿಕೆಟ್ಗಳನ್ನು ಹಸ್ತಚಾಲಿತವಾಗಿ ನೀಡಲಾಗುವುದಿಲ್ಲ. ಪ್ರವಾಸಿಗರು ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳವುದು ಕಡ್ಡಾಯವಾಗಿದೆ. ಇನ್ನು, ರಾಷ್ಟ್ರೀಯ ಏಕತೆ ದಿನವಾದ ಅಕ್ಟೋಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ಕೆವಾಡಿಯಾ ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.