ಕೊಯಮತ್ತೂರು(ತಮಿಳುನಾಡು): ಶ್ರೀಲಂಕಾದ ಭೂಗತ ದೊರೆ ಅಂಗೊಡಾ ಲೊಕ್ಕಾ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಈತ ವಿಷ ಸೇವೆನೆಯಿಂದ ಮೃತಪಟ್ಟಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಜುಲೈ 5 ರಂದು ಸಿಎಂಸಿಹೆಚ್ ಫೋರೆನ್ಸಿಕ್ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದರು. ಮೃತನ ಕೈ-ಕಾಲು ಬೆರಳಿನ ಉಗುರುಗಳು ನೀಲಿ ಬಣ್ಣಕ್ಕೆ ತಿರುಗಿವೆ. ಹೃದಯ ಕೂಡ ಉಬ್ಬಿದೆ. ಅಲ್ಲದೇ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಹೀಗಾಗಿ ವಿಷ ಸೇವನೆಯಿಂದ ಆತ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಆದರೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ತಿಳಿದು ಬಂದಿಲ್ಲವೆಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ಹಿನ್ನೆಲೆ:
ಅಂಗೊಡಾ ಲೊಕ್ಕಾ ಶ್ರೀಲಂಕಾ ಪೊಲೀಸರು ಹುಡುಕುತ್ತಿದ್ದ ಮೋಸ್ಟ್ ವಾಂಟೆಡ್ ಡಾನ್ ಆಗಿದ್ದು, 2017ರಿಂದ ತಲೆಮರೆಸಿಕೊಂಡಿದ್ದ. ಕಳೆದ ಜುಲೈ 3ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಈ ಸಂಬಂಧ ಆಗಸ್ಟ್ 3 ರಂದು ಮೃತದೇಹವನ್ನು ಪಡೆಯಲು ನಕಲಿ ದಾಖಲೆ ನೀಡಿದ ಮೂವರನ್ನು ಕೊಯಮತ್ತೂರು ಪೊಲೀಸರು ಬಂಧಿಸಿದ್ದರು.
ಆಗಸ್ಟ್ 4 ರಂದು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜೆ.ಕೆ. ತ್ರಿಪಾಟಿ ಅವರು ಅಂಗೊಡಾ ಲೊಕ್ಕಾ ಸಾವಿನ ಪ್ರಕರಣವನ್ನು ಅಪರಾಧ ತನಿಖಾ ವಿಭಾಗ (ಸಿಐಡಿ) ಹಾಗೂ ಅಪರಾಧ ಶಾಖೆಗೆ (ಸಿಬಿ) ಹಸ್ತಾಂತರಿಸಿದ್ದರು. ಕೊಯಮತ್ತೂರು ನಗರ ಪೊಲೀಸರಿಂದ ಪ್ರಕರಣದ ವಿವರಗಳನ್ನು ಪಡೆದ ಸಿಬಿ-ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.