ನವದೆಹಲಿ: ಉತ್ತರ ದೆಹಲಿ ರೋಹಿಣಿಯ ಹನುಮಾನ್ ದೇವಸ್ಥಾನದ ಹೊರಗೆ ಕುಳಿತಿದ್ದ ಜನರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ನಾಲ್ವರನ್ನು ಬಂಧಿಸಲಾಗಿದ್ದು, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಸೆಕ್ಟರ್ 16/17ರ ರೋಹಿಣಿ ಪ್ರದೇಶದ ಸಂಕಟ್ ಹನುಮಾನ್ ಮಂದಿರದಲ್ಲಿ ಅಪಘಾತ ಸಂಭವಿಸಿದ್ದು, ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ತಲುಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೀಟ್ ಕಾನ್ಸ್ಟೇಬಲ್ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ತಲುಪಿದ್ದಾರೆ.
"ಗಾಯಗೊಂಡ ಎಲ್ಲರನ್ನು ಬಿಎಸ್ಎ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತದ ಸ್ಥಳ ಪರಿಶೀಲಿಸಿದ ನಂತರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಕಾರು ಬುದ್ಧ ವಿಹಾರ ನಿವಾಸಿ ರಾಹುಲ್ ಎಂಬುವವರಿಗೆ ಸೇರಿದ್ದಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹರೀಶ್ (40) ಮತ್ತು ವಿಮಲಾ (35) ಮೃತಪಟ್ಟವರು ಎನ್ನಲಾಗಿದೆ. ಅನ್ಶು (5) ಮತ್ತು ಸೂರಜ್ (11) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.