ನವದೆಹಲಿ: ಪ್ರಯಾಣಿಕರ ರೈಲು ಸಂಚಾರ ತಾತ್ಕಾಲಿಕವಾಗಿ ನಿಂತು ಹೋಗಿದ್ದರೂ ಅಗತ್ಯ ವಸ್ತುಗಳ ಸಾಗಣೆಯಿಂದ ಭಾರತೀಯ ರೈಲ್ವೆ ಆದಾಯ ಗಳಿಸುತ್ತಿದೆ. 21 ದಿನಗಳ ಲಾಕ್ಡೌನ್ ಅವಧಿಯಲ್ಲಿ ರೈಲ್ವೆಗೆ 7.54 ಕೋಟಿ ರೂ. ಆದಾಯ ಬಂದಿದೆ.
21 ದಿನಗಳ ಅವಧಿಯಲ್ಲಿ ವಿಶೇಷ ರೈಲು ಸಂಚಾರದ ಮೂಲಕ ರೈಲ್ವೆ ಇಲಾಖೆ 20,400 ಟನ್ ಸರಕು ಸಾಗಣೆ ಮಾಡಿದ್ದು, 7.5 ಕೋಟಿ ರೂ. ಆದಾಯ ಗಳಿಸಿದೆ. ಲಾಕ್ಡೌನ್ನಲ್ಲಿ ರೈಲ್ವೆ ಇಲಾಖೆ ಇ-ಕಾಮರ್ಸ್ ಕಂಪನಿಗಳು, ಸಾರ್ವಜನಿಕರು ಹಾಗೂ ರಾಜ್ಯ ಸರ್ಕಾರಗಳ ಸರಕು ಸಾಗಣೆಗೆ ವಿಶೇಷ ರೈಲು ಸಂಚಾರ ವ್ಯವಸ್ಥೆ ಮಾಡಿತ್ತು.
"ಅಗತ್ಯ ವಸ್ತುಗಳ ಕೊರತೆಯಾಗದಂತೆ ನೋಡಿಕೊಳ್ಳಲು ನಿರ್ದಿಷ್ಟ ವೇಳಾಪಟ್ಟಿಯ ಅನುಸಾರ ಗೊತ್ತುಪಡಿಸಿದ ಮಾರ್ಗಗಳಲ್ಲಿ ವಿಶೇಷ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ನಿರ್ಧರಿಸಿತ್ತು. ಅದರಂತೆ 65 ಮಾರ್ಗಗಳಲ್ಲಿ ರೈಲುಗಳು ಸಂಚರಿಸಿವೆ. ಏ.14 ರ ಸಂಜೆ 6ರ ಹೊತ್ತಿಗೆ 77 ರಲ್ಲಿ 75 ವಿಶೇಷ ಪಾರ್ಸಲ್ ರೈಲುಗಳು ವೇಳಾಪಟ್ಟಿಯ ಅನುಸಾರ 1,835 ಟನ್ ಸರಕನ್ನು ಸಾಗಿಸಿದ್ದವು ಹಾಗೂ ಇವುಗಳಿಂದ ದಿನದಲ್ಲಿ 63 ಲಕ್ಷ ರೂ. ಆದಾಯ ಬಂದಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.