ಶ್ರೀಲಂಕಾದಲ್ಲಿ ರಾಜಪಕ್ಸೆ ಸೋದರರು ಪುನಃ ಅಧಿಕಾರಕ್ಕೇರಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಘಟನೆಗಳು ಭಾರತ-ಶ್ರೀಲಂಕಾ ಮಧ್ಯದ ಸಂಬಂಧದ ಮೇಲೆ ಕರಿನೆರಳು ಬೀರಬಾರದು ಎಂಬುದಾಗಿ ಮಾಜಿ ವಿದೇಶಾಂಗ ಕಾರ್ಯದರ್ಶಿ ಶ್ಯಾಮ್ ಸರಣ್ ಎಚ್ಚರಿಕೆ ನೀಡಿದ್ದಾರೆ. ನೆರೆ ದೇಶದ ಮೇಲೆ ಚೀನಾದ ಪ್ರಭಾವ ಹೆಚ್ಚುತ್ತಿರುವುದು ಮತ್ತು ಭಾರತಕ್ಕೆ ಚೀನಾ ನಿಜವಾದ ಸವಾಲು ಎಂಬ ವಾಸ್ತವವನ್ನೂ ನಾವು ಗಮನಿಸಬೇಕು. ಪಾಕಿಸ್ತಾನವು ಚೀನಾ ಜೊತೆಗೆ ಕೈಜೋಡಿಸಿರುವ ಕಾರಣಕ್ಕೆ ನಮಗೆ ಮುಳುವಾಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮಾತನಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಜೊತೆಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸರಣ್, ಆರ್‌ಸಿಇಪಿ ಇಂದ ಹಿಂದೆ ಸರಿಯುವ ಭಾರತದ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ದೇಶದ ಮಟ್ಟದಲ್ಲಿ ಆಕ್ಷೇಪಗಳು ಇದ್ದರೂ, 1996 ರಲ್ಲಿ ದೇಶದ ಆರ್ಥಿಕತೆಯನ್ನು ಉದಾರವಾದಕ್ಕೆ ತೆರೆಯುವ ಮೂಲಕ ನರಸಿಂಹ ರಾವ್ ಸರ್ಕಾರವು ದೇಶಕ್ಕೆ ಭಾರಿ ಅನುಕೂಲ ಕಲ್ಪಿಸಿತು. ಆರ್‌ಸಿಇಪಿ ಇಂದ ಭಾರತ ಹಿಂದಕ್ಕೆ ಸರಿದರೆ, ಅಮೆರಿಕದಂತಹ ಅಭಿವೃದ್ಧಿಗೊಂಡ ದೇಶದೊಂದಿಗೆ ಎಫ್‌ಟಿಎ (ಮುಕ್ತ ವ್ಯಾಪಾರ ಒಪ್ಪಂದ) ಗೆ ಸಹಿ ಹಾಕುವುದು ಅತ್ಯಂತ ಕಷ್ಟಕರವಾಗಲಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜವಾಗಿದೆ ಎಂಬ ಗೃಹ ಸಚಿವರ ಹೇಳಿಕೆಯನ್ನು ಅವರು ಆಕ್ಷೇಪಿಸಿದ್ದಾರೆ ಮತ್ತು ಶೀಘ್ರದಲ್ಲೇ ಪರಿಸ್ಥಿತಿ ಸುಧಾರಿಸದಿದ್ದರೆ ಮಿತೃ ರಾಷ್ಟ್ರಗಳೂ ಆಕ್ಷೇಪ ವ್ಯಕ್ತಪಡಿಸುತ್ತವೆ ಎಂದಿದ್ದಾರೆ. ಇತ್ತೀಚೆಗೆ ಬಿಡುಗಡೆ ಮಾಡಿದ ಭಾರತದ ರಾಜಕೀಯ ನಕ್ಷೆಯಲ್ಲಿ ಕಾಲಾಪಾನಿಯನ್ನೂ ಸೇರಿಸಿರುವ ಕುರಿತು ನೇಪಾಳದ ಜೊತೆಗಿನ ರಾಜತಾಂತ್ರಿಕ ವಿವಾದಗಳ ಕುರಿತು ಮಾತನಾಡಿದ ಅವರು, ಇದು ಅನಗತ್ಯ ವಿವಾದ ಎಂದಿದ್ದಾರೆ. ಅಲ್ಲದೆ, ಈ ಹಿಂದೆ ಭಾರತ-ನೇಪಾಳ ಗಡಿಯಲ್ಲಿನ ಸಮಸ್ಯೆ ಉದ್ಭವಿಸಿದ ರೀತಿಯಲ್ಲೇ ಈಗ ನಕ್ಷೆಯ ಮೂಲಕ ವಿವಾದವನ್ನು ಸೃಷ್ಟಿಸಲು ಯತ್ನಿಸುತ್ತಿರುವ ನೇಪಾಳದಲ್ಲಿ ಪಟ್ಟಭದ್ರ ರಾಜಕೀಯ ಶಕ್ತಿಗಳನ್ನು ಅವರು ಟೀಕಿಸಿದ್ದಾರೆ. ಈಟಿವಿ ಭಾರತ್‌ಗೆ ಶ್ಯಾಮ್ ಸರಣ್ ನೀಡಿದ ಸಂದರ್ಶನದ ಪೂರ್ಣ ವಿವಿರ ಇಲ್ಲಿದೆ.
ಸಂದರ್ಶನದ ಮುಖ್ಯಾಂಶಗಳು:
- ರಾಜಪಕ್ಸೆ ಮರಳಿ ಅಧಿಕಾರಕ್ಕೇರಿದ ಮೇಲೆ ಭಾರತ-ಶ್ರೀಲಂಕಾ ಸಂಬಂಧಕ್ಕೆ ಕಹಿನೆನಪುಗಳು ಮರೆಯಲಿ- ಶ್ಯಾಮ್ ಸರಣ್
- ಚೀನಾ ನಿಜವಾದ ಸವಾಲು, ಭಾರತವು ಪಾಕ್ ಜೊತೆಗೆ ಸಂಬಂಧ ಮರು ವಿಶ್ಲೇಷಣೆ ಮಾಡುತ್ತಿದೆ-–ಮಾಜಿ ವಿದೇಶಾಂಗ ಕಾರ್ಯದರ್ಶಿ
- ಕಾಲಾಪಾನಿ ವಿಚಾರ ಅನಗತ್ಯ, ಭಾರತದಿಂದ ಯಾವುದೇ ಪ್ರಚೋದನೆಯೂ ಇಲ್ಲ-ಶ್ಯಾಮ್ ಸರಣ್
ಪ್ರಶ್ನೆ: ಶ್ರೀಲಂಕಾದಲ್ಲಿ ಗೊಟಾಬಾಯ ರಾಜಪಕ್ಸೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಮತ್ತು ಮಹಿಂದಾ ರಾಜಪಕ್ಸೆ ಹೊಸ ಪ್ರಧಾನಿಯಾಗಿದ್ದಾರೆ. ಶ್ರೀಲಂಕಾದ ಮೇಲೆ ಚೀನಾದ ಪ್ರಭಾವದ ಕುರಿತ ಭೀತಿ ಪುನಃ ಭಾರತದಲ್ಲಿ ಕೇಳಿಬಂದಿದೆ. ಈಗ ಭಾರತ ಏನು ಮಾಡಬೇಕಿದೆ?
ರಾಜತಾಂತ್ರಿಕತೆಯಲ್ಲಿ ಹಳೆಯ ಸಮಸ್ಯೆಗಳನ್ನು ಪುನಃ ನೆನಪಿಸಿಕೊಳ್ಳದೇ ಇರುವುದು ಒಂದು ಒಳ್ಳೆಯ ಸಂಗತಿ. ಭಾರತ-ಶ್ರೀಲಂಕಾ ಸಂಬಂಧ ಏನಾಗಬಹುದು ಎಂಬ ಬಗ್ಗೆ ರಾಜಪಕ್ಸೆ ವಾಪಸಾಗಿರುವುದರಿಂದ ಆತಂಕ ಮೂಡಿರುವುದು ಸಹಜ. ಆದರೆ ಸಂಬಂಧವನ್ನು ಮುಂದುವರಿಸಲು ನಮಗೆ ಹಲವು ಅವಕಾಶಗಳಿವೆ ಎಂದು ನಾನು ಭಾವಿಸಿದ್ದೇನೆ. ಎರಡೂ ದೇಶಗಳ ಮಧ್ಯೆ ಸಂಬಂಧ ಹಾಗೂ ಆರ್ಥಿಕ ಪಾಲುದಾರಿಕೆಗಳಿವೆ. ಕಳೆದ ಹಲವು ವರ್ಷಗಳಿಂದಲೂ ಭಾರತದ ದಕ್ಷಿಣ ರಾಜ್ಯಗಳೊಂದಿಗೆ ಒಂದು ಉತ್ತಮ ಸಂಬಂಧ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಶ್ರೀಲಂಕಾಗೂ ಅನುಕೂಲವಾಗಿದೆ. ರಾಜಪಕ್ಸ ಸೋದರರು ಯೋಚನಾಬದ್ಧವಾಗಿ ಕೆಲಸ ಮಾಡುವ ನಾಯಕರಾಗಿದ್ದರೆ, ಭಾರತ ಮತ್ತು ಶ್ರೀಲಂಕಾ ಸಂಬಂಧ ಸುಧಾರಣೆಯಿಂದ ಲಾಭವನ್ನೂ ಪರಿಗಣಿಸುತ್ತಾರೆ ಹಾಗೂ ಅವರು ಕೇವಲ ಹಿಂದಿನ ಕರಿನೆರಳಿನಲ್ಲೇ ಸಂಬಂಧ ಮುಂದುವರಿಸುವುದಿಲ್ಲ. ಚೀನಾ ವಿಚಾರವನ್ನು ಗಮನಿಸುವುದಾದರೆ, ಶ್ರೀಲಂಕಾದಲ್ಲೂ ಈ ಕುರಿತ ಆತಂಕ ಮೂಡಿದೆ. ಚೀನಾದಿಂದ ಬರುತ್ತಿರುವ ಹೂಡಿಕೆಯ ಪ್ರಮಾಣವನ್ನು ನೋಡಿದರೆ ಇದು ತಮಗೂ ಕೆಲವು ವಿಚಾರದಲ್ಲಿ ಅವಲಂಬನೆ ಮತ್ತು ಆರ್ಥಿಕ ಸವಾಲು ಒಡ್ಡಬಹುದು ಎಂದು ಶ್ರಿಲಂಕಾದಲ್ಲಿ ಆತಂಕ ಹುಟ್ಟಿಕೊಂಡಿದೆ. ಹೀಗಾಗಿ ಭಾರತ ಮತ್ತು ಚೀನಾ ಮಧ್ಯೆ ಸಮತೋಲಿತ ಸಂಬಂಧ ಅವರಿಗೆ ಅಗತ್ಯವಿದೆ.
ಪ್ರಶ್ನೆ: ಭಾರತದ ಸುಮ್ಮನೆ ಕುಳಿತು ದೇಶೀಯ ಮಟ್ಟದಲ್ಲಿ ಏನು ನಡೆಯುತ್ತಿದೆ ಎಂದು ಕಾಯುವುದು ಸಾಧ್ಯವೇ?
ಹಲವು ಬಾರಿ ಮಾಜಿ ಅಧ್ಯಕ್ಷ ಸಿರಿಸೇನಾ ಮತ್ತು ಪ್ರಧಾನಿ ವಿಕ್ರಮಸಿಂಘೆ ಮಧ್ಯದ ರಾಜಕೀಯ ಕಾದಾಟಗಳ ಕೇಂದ್ರ ಬಿಂದು ಭಾರತವೇ ಆಗಿತ್ತು ಎಂಬುದನ್ನು ನಾವು ಈ ಹಿಂದೆ ಗಮನಿಸಿದ್ದೇವೆ.
ನನ್ನ ಅನುಭವದಲ್ಲಿ ನೆರೆ ದೇಶಗಳೊಂದಿಗಿನ ಸಂಬಂಧದಲ್ಲಿ ನಾವು ದೇಶೀಯ ರಾಜಕೀಯದೊಳಕ್ಕೆ ನುಸುಳುವುದು ಉತ್ತಮ ವಿಧಾನವಲ್ಲ. ಕೆಲವು ಬಾರಿ ಅದನ್ನು ದೂರವಿಡಲಾಗದು. ಆದರೆ ಆಂತರಿಕ ರಾಜಕಾರಣದಲ್ಲಿ ತುಂಬಾ ತೊಡಗಿಸಿಕೊಳ್ಳುವುದು ಉತ್ತಮ ನೀತಿಯಲ್ಲ. ನೆರೆ ದೇಶಗಳ ನಾಯಕರನ್ನು ಇವರು ಸ್ನೇಹಿತರು, ಇವರು ಸ್ನೇಹಿತರಲ್ಲ ಎಂದು ವಿಭಜಿಸುವುದರಿಂದ ಯಾವಾಗಲೂ ಲಾಭವಾಗುವುದಿಲ್ಲ. ಕೆಲವು ಸಾಮಾನ್ಯ ಹಿತಾಸಕ್ತಿಗಳು, ಘಟನೆಗಳು ಮತ್ತು ಸಿದ್ಧಾಮತಗಳ ಆಧಾರದಲ್ಲಿ ಈ ಸಂಬಂಧವನ್ನು ಮುನ್ನಡೆಸುವುದು ಎಲ್ಲಕ್ಕಿಂತ ಹೆಚ್ಚು ಲಾಭ ತಂದುಕೊಡುತ್ತದೆ. ಶ್ರೀಲಂಕಾದಲ್ಲಿ ಆಂತರಿಕ ರಾಜಕೀಯ ಯಾವ ರೀತಿ ಇದೆ ಎಂಬ ಬಗ್ಗೆ ನಾನು ಯೋಚಿಸುವುದಿಲ್ಲ. ಯಾಕೆಂದರೆ ನೆರೆ ದೇಶದ ಆಂತರಿಕ ರಾಜಕಾರಣದಲ್ಲಿ ನೇರವಾಗಿ ನಮ್ಮ ಏಜೆನ್ಸಿಗಳು ತೊಡಗಿಸಿಕೊಳ್ಳಬಲ್ಲದು ಎಂಬುದನ್ನು ಗಮನಿಸಿದರೆ, ನಾನು ಆಂತರಿಕ ರಾಜಕಾರಣದ ಬಗ್ಗೆ ಆತಂಕಗೊಳ್ಳುವುದಿಲ್ಲ. ದೇಶೀಯ ರಾಜಕೀಯ ಯಾವ ರೀತಿ ನಡೆಯುತ್ತಿದೆ ಮತ್ತು ಈ ಸನ್ನಿವೇಶದಲ್ಲಿ ಸಾಮಾನ್ಯ ಹಿತಾಸಕ್ತಿಗಳ ನಿಟ್ಟಿನಲ್ಲಿ ನಾವು ಯಾವ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂಬುದನ್ನು ನಾವು ಗಮನಿಸಬೇಕು.
ಪ್ರಶ್ನೆ: ಮೋದಿ ಸರ್ಕಾರವು ದೃಷ್ಟಿಕೋನದ ಬಗ್ಗೆ ಹೆಚ್ಚು ಗಮನ ಹರಿಸುತ್ತದೆ. ಗೊಟಾಬಾಯ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ವಿದೇಶಾಂಗ ಸಚಿವ ಜೈಶಂಕರ್ ಕೊಲಂಬೋಗೆ ತೆರಳಿದ್ದರು. ಗೊಟಾಬಾಯ ತನ್ನ ಮೊದಲ ವಿದೇಶ ಭೇಟಿಯಾಗಿ ಭಾರತಕ್ಕೆ ಆಗಮಿಸುವುದು ಎಷ್ಟು ಮುಖ್ಯ?
ಇದು ಮಹತ್ವದ ಸಂಗತಿ. ಬಹುತೇಕ ವಿದೇಶಾಂಗ ಸಂಬಂಧಗಳು ದೃಷ್ಟಿಕೋನವನ್ನೇ ಅವಲಂಬಿಸಿರುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ. ಅದನ್ನು ಪ್ರಮುಖವಲ್ಲ ಎಂದೂ ನಾನು ಹೇಳುವುದಿಲ್ಲ. ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆಯೇ ಶ್ರೀಲಂಕಾಗೆ ಜೈಶಂಕರ್ ತೆರಳಿರುವುದು ಉತ್ತಮ ಸಂಗತಿ. ಶ್ರೀಲಂಕಾದೊಂದಿಗೆ ನಮ್ಮ ಸಂಬಂಧಕ್ಕೆ ನಾವು ತುಂಬಾ ಪ್ರಾಮುಖ್ಯತೆ ನೀಡುತ್ತೇವೆ ಎಂಬುದನ್ನು ಇದು ತೋರಿಸುತ್ತದೆ. ದೃಷ್ಟಿಕೋನಗಳೇ ಸಾಲದು. ಅದಕ್ಕೆ ಸೂಕ್ತ ಕ್ರಮದ ಬೆಂಬಲವೂ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ನಾವು ಗಮನ ಹರಿಸಬೇಕಿದೆ. ಮೊದಲ ವಿದೇಶಿ ಭೇಟಿಯಾಗಿ ಭಾರತಕ್ಕೆ ಆಗಮಿಸಲು ಒಪ್ಪುವ ಮೂಲಕ ಭಾರತದೊಂದಿಗೆ ಸಂಬಂಧ ಪ್ರಮುಖವಾದದ್ದು ಎಂದು ಗೊಟಾಬಾಯ ಕೂಡ ಹೇಳಿರುವುದು ಉತ್ತಮ ಸಂಗತಿ. ಕೆಲವು ಸಮಸ್ಯೆಗಳನ್ನು ಪರಿಹರಿಸಲು ಇದು ಒಂದು ಉತ್ತಮ ಅವಕಾಶವೂ ಆಗಿದೆ. ಎರಡೂ ದೇಶಗಳ ಮಧ್ಯೆ ಯಾವ ರೀತಿಯ ಆರ್ಥಿಕ ಪಾಲುದಾರಿಕೆಯನ್ನು ಮಾಡಿಕೊಳ್ಳಬಹುದು ಎಂಬುದನ್ನು ಈ ಸನ್ನಿವೇಶದಲ್ಲಿ ನಾವು ಪರಿಶೀಲಿಸಬಹುದು. ಶ್ರೀಲಂಕಾಗೆ ವಿದ್ಯುತ್ ಪೂರೈಕೆ ಮಾಡಲು ಕ್ರಾಸ್ ಚಾನೆಲ್ ಕೇಬಲ್ ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಯಿದೆ. ಈ ರೀತಿಯ ಯೋಜನೆಗಳು ನಮ್ಮ ಸಂಬಂಧವನ್ನು ಸುಧಾರಿಸುತ್ತವೆ. ಸಾಗಾಣಿಕೆ ವಿಚಾರದಲ್ಲಿ ಕೋಲಂಬೋ ಬಂದರು ಅತ್ಯಂತ ಪ್ರಮುಖವಾದದ್ದು. ಇದು ಭಾರತಕ್ಕೆ ಅತ್ಯಂತ ಅಮೂಲ್ಯವೂ ಹೌದು. ಈ ಪ್ರಸ್ತುತ ಸಂಬಂಧಗಳನ್ನು ಸುಧಾರಿಸಿಕೊಳ್ಳುವುದೂ ಅಗತ್ಯ. ಭಾರತ ಮತ್ತು ಶ್ರೀಲಂಕಾ ಮಧ್ಯೆ ಭಾರಿ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಿದ್ದಾರೆ. ಇದನ್ನು ನಾವು ಹೆಚ್ಚು ಗಮನಿಸಿಲ್ಲ. ಭಾರತದಿಂದ ವಾರಕ್ಕೆ ಸುಮಾರು 120 ವಿಮಾನಗಳು ಹಾರಾಡುತ್ತವೆ. ಇದರ ಜೊತೆಗೆ ಇನ್ನಷ್ಟು ಹೊಸ ವಿಮಾನಗಳೂ ಆರಂಭವಾಗಿವೆ. ಇಂಥ ಸಂಗತಿಗಳನ್ನು ನಾವು ಗಮನಿಸಬೇಕು ಮತ್ತು ಇವುಗಳನ್ನು ಸುಧಾರಿಸಿಕೊಳ್ಳಬೇಕು.
ನೆರೆ ದೇಶದಲ್ಲಿ ಚೀನಾ ತನ್ನ ಪ್ರಭಾವ ವೃದ್ಧಿಸಿಕೊಳ್ಳುತ್ತಿರುವುದು ವಾಸ್ತವ. ನಮ್ಮ ಸಾಮರ್ಥ್ಯ, ನಾವು ಒದಗಿಸಬಹುದಾದ ಸಂಪನ್ಮೂಲವು ನಮಗೆ ಹಿನ್ನಡೆ ಉಂಟು ಮಾಡುತ್ತವೆ. ಶ್ರೀಲಂಕಾ, ನೇಪಾಳ ಅಥವಾ ಬಾಂಗ್ಲಾದೇಶವೇ ಆಗಿರಲಿ ಈ ಅನಾನುಕೂಲತೆಯನ್ನು ನಾವು ನಿವಾರಿಸಿಕೊಳ್ಳಬೇಕು ಮತ್ತು ಈ ದೇಶಗಳೊಂದಿಗೆ ನಮ್ಮ ಸಂಬಂಧವನ್ನು ಸುಧಾರಿಸಲು ಯಾವುದು ಪ್ರಮುಖ ಅಂಶ ಎಂಬುದನ್ನು ನಾವು ಪರಿಶೀಲಿಸಿಕೊಳ್ಳಬೇಕು. ಇದರಿಂದ ವಿದೇಶಾಂಗ ನೀತಿಯಲ್ಲಿ ನಮ್ಮ ನೆರ ದೇಶದ ಲೆಕ್ಕಾಚಾರಗಳಿಗೆ ಹೋಲಿಸಿದರೆ ನಾವು ವಿಭಿನ್ನವಾಗಿ ನಿಲ್ಲಬಹುದು.
ಪ್ರಶ್ನೆ: ಮಾಜಿ ಎನ್‌ಎಸ್‌ಎ ಮತ್ತು ವಿದೇಶಾಂಗ ಕಾರ್ಯದರ್ಶಿ ಎಸ್‌ಎಸ್ ಮೆನನ್, ಈಟಿವಿ ಭಾರತ್‌ಗೆ ನೀಡಿದ ಸಂದರ್ಶನದಲ್ಲಿ ಕೊಲಂಬೋ ಬಂದರು ಉದಾಹರಣೆಯನ್ನು ನೀಡಿದ್ದಾರೆ ಮತ್ತು ಚೀನಾದ ಬಿಆರ್‌ಐ (ಬೆಲ್ಟ್ ಆಂಡ್ ರೋಡ್ ಯೋಜನೆ)ಗೆ ಆಕ್ಷೇಪಿಸಬಾರದು ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಯಾವುದೇ ಪ್ಲಾಟ್‌ಫಾರಂ ಅನ್ನು ರಚಿಸಿದರೆ, ಅದನ್ನು ಯಾರು ರಚಿಸಿದ್ದಾರೋ ಅವರಿಗೆ ವಿಶೇಷ ಬಳಕೆಗೆ ಅದು ಅನುವು ಮಾಡುವುದಿಲ್ಲ. ನಮ್ಮ ಹಿತಾಸಕ್ತಿಗೆ ಅನುಗುಣವಾಗಿದ್ದರೆ ಯಾಕೆ ನಾವು ಇದನ್ನು ಬಳಸಿಕೊಳ್ಳಬಾರದು? ಕೋಲಂಬೋ ಬಂದರಿನ ವಿಚಾರದಲ್ಲೂ, ಕೆಲವು ಹೊಸ ಟರ್ಮಿನಲ್‌ಗಳನ್ನು ಚೀನಾ ಇದಕ್ಕೆ ಸೇರಿಸಿರಬಹುದು. ಆದರೆ ಈ ಟರ್ಮಿನಲ್‌ಗಳು ಅಂತಾರಾಷ್ಟ್ರೀಯ ಸಾಗಣೆಗೆ ಲಭ್ಯವಿವೆ. ಕೇವಲ ಇದನ್ನು ಚೀನಾ ನಿರ್ಮಿಸಿದೆ ಎಂದ ಮಾತ್ರಕ್ಕೆ, ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಲಾಗದು. ಚೀನಾ ಈ ಬಗ್ಗೆ ನಿರ್ಧಾರ ಮಾಡಬೇಕು.
ಪ್ರಶ್ನೆ: ಆದರೆ ಭಾರತವು ಬಿಆರ್‌ಐ ಅನ್ನು ವಿರೋಧಿಸುತ್ತಿರುವುದಕ್ಕೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಿಪಿಇಸಿ ನಿರ್ಮಾಣ ಮಾಡುತ್ತಿರುವುದಕ್ಕೂ ಸಂಬಂಧವಿದೆ.
ಇದು ಹಲವು ಕಾರಣಗಳಿಂದ ಹುಟ್ಟಿದ್ದ ಎಚ್ಚರಿಕೆ. ಎಐಐಬಿ (ಏಷ್ಯಾ ಇನ್‌ಫ್ರಾಸ್ಟ್ರಕ್ಷರ್ ಬ್ಯಾಂಕ್) ಅಥವಾ ಬ್ರಿಕ್ಸ್ ಡೆವಲಪ್ ಬ್ಯಾಂಕ್ ಮಧ್ಯೆ ವ್ಯತ್ಯಾಸ ನಮಗೆ ಅರ್ಥವಾಗುತ್ತದೆಯಲ್ಲವೇ? ಈ ಎರಡರಲ್ಲೂ ಭಾರತವು ಉತ್ಸಾಹದಿಂದ ಭಾಗವಹಿಸಿದೆ. ಈ ಎರಡೂ ಬ್ಯಾಂಕ್‌ಗಳಿಗೆ ನೇತೃತ್ವವನ್ನು ಚೀನಾ ವಹಿಸಿಕೊಂಡಿದೆ. ಎಐಐಬಿಯಲ್ಲಿ ಭಾರತವೇ ಅತಿ ಹೆಚ್ಚು ಪಾಲುದಾರಿಕೆ ಹೊಂದಿದೆ. ಈ ಎರಡೂ ಸಂಸ್ಥೆಗಳಿಗೆ ರೂಪ ನೀಡುವಲ್ಲಿ ಭಾರತ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿದೆ. ಇದನ್ನು ಹೇಗೆ ರೂಪಿಸಬೇಕು, ಸಾಲ ನೀತಿ ಹೇಗಿರಬೇಕು, ಪ್ರಾಜೆಕ್ಟ್‌ನ ಸಾಧ್ಯಾಸಾಧ್ಯತೆಗಳನ್ನು ವಿಶ್ಲೇಷಣೆ ಹೇಗೆ ಮಾಡಬೇಕು ಎಂಬುದನ್ನು ನಿರ್ಧರಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ. ಈಗ ಎಐಐಬಿ ಇಂದ ಸಾಲ ತೆಗೆದುಕೊಳ್ಳುವಲ್ಲಿ ಅತ್ಯಂತ ಪ್ರಮುಖ ದೇಶವೂ ಭಾರತವೇ ಆಗಿದೆ.ಬಿಆರ್‌ಐ ಯಾಕೆ ವಿಭಿನ್ನ? ಯಾಕೆಂದರೆ ಅದೊಂದು ಹಲವು ದೇಶಗಳು ಒಳಗೊಂಡ ಯೋಜನೆಯಲ್ಲ. ಅದನ್ನು ವಿನ್ಯಾಸ ಮಾಡಿದ್ದು ಚೀನಾ. ಚೀನಾ ಅದಕ್ಕೆ ಹಣಕಾಸು ಒದಗಿಸುತ್ತದೆ ಮತ್ತು ಇದರ ವಿನ್ಯಾಸ ಹಾಗೂ ರಚನೆಯ ಬಗ್ಗೆ ನಮಗೆ ಏನೇನೂ ತಿಳಿದಿರುವುದಿಲ್ಲ. ಈ ಜಾಗತಿಕ ಉಪಕ್ರಮವನ್ನು ಹೇಗೆ ಜಾರಿಗೊಳಿಸಲಾಗುತ್ತದೆ ಎಂಬ ಸಲಹೆಯನ್ನು ಅವರು ಕೇಳಿಲ್ಲ. ಉದಾಹರಣೆಗೆ ಯಾವುದೇ ಇತರ ದೇಶದಲ್ಲಿ ಭಾರತ ಮತ್ತು ಚೀನಾ ಸಹಕಾರ ನೀಡಿ ಒಂದು ಯೋಜನೆಯನ್ನು ಕೈಗೆತ್ತಿಕೊಂಡು ಅದು ಎರಡೂ ದೇಶಗಳಿಗೆ ಅನುಕೂಲವಾಗುವಂತಿದ್ದರೆ, ಆಗ ಯಾವ ಸಮಸ್ಯೆಯೂ ಇಲ್ಲ. ಬಿಆರ್‌ಐ ವಿಚಾರದಲ್ಲಿ ನಾವು ಸೈದ್ಧಾಂತಿಕ ನಿಲುವನ್ನೇನೂ ನಾವು ಹೊಂದುತ್ತಿಲ್ಲ.
ಪ್ರಶ್ನೆ: ಬಿಆರ್‌ಐ ನಲ್ಲಿ ಸಹಕರಿಸಿದರೆ ಇತರ ವಿಷಯಗಳಲ್ಲಿ ಚೀನಾ ಜೊತೆಗಿನ ಸಂಘರ್ಷಕ್ಕೆ ಕಾರಣವಾಗಬಹುದೇ?
ನಾನು ಆ ಬಗ್ಗೆ ಸಲಹೆ ನೀಡುವುದಿಲ್ಲ. ಬಿಆರ್‌ಐ ರೂಪಿಸಿರುವ ಕುರಿತು ನಮಗೆ ಸಕಾರಣ ಅನುಮಾನಗಳಿವೆ. ಆ ವಿಚಾರವನ್ನು ನಾವು ಬಿಡಲಾಗದು. ಯಾಕೆಂದರೆ ಅಲ್ಲಿ ಸರಿಪಡಿಸಬೇಕಾದ ಸಂಗತಿಗಳಿವೆ. ಬಿಆರ್‌ಐ ಬಗ್ಗೆ ನಮ್ಮ ಆಕ್ಷೇಪಗಳ ಹೊರತಾಗಿಯೂ, ಆರ್ಥಿಕವಾಗಿ ಅನುಕೂಲರವಾದ ಮತ್ತು ನಮ್ಮೆರಡೂ ದೇಶಗಳು ಮತ್ತು ಮೂರನೇ ದೇಶಕ್ಕೆ ಅನುಕೂಲರವಾಗಿದ್ದರೆ ಚೀನಾ ಜೊತೆಗೆ ವಹಿವಾಟು ನಡೆಸದೇ ಇರಲು ನಿರ್ಧರಿಸಬೇಡಿ ಎಂದು ನಾನು ಹೇಳಲು ಬಯಸುತ್ತೇನೆ.
ಪ್ರಶ್ನೆ: ಆರ್‌ಸಿಇಪಿ ಇಂದ ಭಾರತ ಹೊರಕ್ಕೆ ಬಂದಿರುವುದು ಉತ್ತಮ ಸಂಗತಿಯೇ?
ಭಾರತವು ಪ್ರಮುಖ ದೇಶೀಯ ಮತ್ತು ಜಾಗತಿಕ ದೇಶವಾಗುವ ಮಹತ್ವಾಕಾಂಕ್ಷೆ ಹೊಂದಿರುವುದರಿಂದ ಆರ್‌ಸಿಇಪಿಗೆ ಸೇರದೇ ಇರುವುದು ನನಗೆ ಬೇಸರ ತರಿಸಿದೆ. ಪ್ರಾದೇಶಿಕ ಅಥವಾ ಜಾಗತಿಕ ಆರ್ಥಿಕತೆಯ ಅಂಚಿನಲ್ಲಿ ಈ ನಿರ್ಧಾರವನ್ನು ನಾವು ಕೈಗೊಳ್ಳುವುದು ಸರಿಯಲ್ಲ. ಇದು ರಕ್ಷಣಾತ್ಮಕ ನಿರ್ಧಾರವಾಗಿದ್ದು, ಅನಗತ್ಯ.
ಪ್ರಶ್ನೆ: ಚೀನಾದ ಉತ್ಪನ್ನಗಳನ್ನು ಭಾರತಕ್ಕೆ ಸುರಿಯುವ ಹುನ್ನಾರ ಆರ್‌ಸಿಇಪಿ ಎಂದು ಭಾರತ ಹೇಳುತ್ತಿದೆ.
ನಾನು ಪ್ರಧಾನಿ ಕಚೇರಿಯಲ್ಲಿದ್ದಾಗಲೇ ವಿಪತ್ತಿನ ಸ್ಥಿತಿ ಎದುರಾಗಿತ್ತು. ಆಗ ನಾವು ಆರ್ಥಿಕತೆಯನ್ನು ಮುಕ್ತಗೊಳಿಸಬೇಕೆ ಅಥವಾ ಬೇಡವೇ ಎಂದು ಚರ್ಚೆ ನಡೆಸುತ್ತಿದ್ದೆವು. ನಾವು ದೀರ್ಘಕಾಲೀನ ಸುಧಾರಣೆಗಳು ಮತ್ತು ಉದಾರವಾದಕ್ಕೆ ತೆರೆದುಕೊಳ್ಳಬೇಕಿತ್ತು. ಆಗ ನಾವು ಮಾಡುತ್ತಿದ್ದ ವಾದಗಳನ್ನೇ ಆಗಲೂ ನಾವು ಮಾಡುತ್ತಿದ್ದೆವು. ಆದರೆ, ಆಗಿನ ರಾಜಕೀಯ ನಾಯಕತ್ವವು ನಿರ್ಧಾರ ತೆಗೆದಿಕೊಂಡಿತು ಮತ್ತು ಆಗಿನ ಸರ್ಕಾರದ ವಿಚಾರದಲ್ಲಿ ಹೇಳುವುದಾದರೆ ಅತ್ಯಂತ ಅಪಾಯಕರ ನಿರ್ಧಾರವಾಗಿತ್ತು. ಮುಂದಿನ ಇಪ್ಪತ್ತು ವರ್ಷಗಳಲ್ಲಿ ನಾವು ಫಲಿತಾಂಶವನ್ನು ಕಂಡಿದ್ದೇವೆ. ಭಾರತದ ಆರ್ಥಿಕತೆ ಬೆಳವಣಿಗೆಯು ಶೇ. 3 ರಿಂದ ಶೇ. 3.5 ರಷ್ಟಿದ್ದಿದ್ದು, ಶೇ. 8-9 ಕ್ಕೆ ಏರಿಕೆ ಕಂಡಿತು. ಪ್ರಾದೇಶಿಕ ಶಕ್ತಿಯಾಗಿ ಬೆಳೆಯುವ ನಮ್ಮ ನಿರೀಕ್ಷೆ ಈಗ ಈ ಹಂತಕ್ಕೆ ಹೇಗೆ ಬಂದು ನಿಂತಿತು? ಕಳೆದ ಇಪ್ಪತ್ತು ವರ್ಷಗಳಲ್ಲಿ ಶೇ. 8-9 ರ ವೇಗದಲ್ಲಿ ಪ್ರಗತಿ ಕಂಡು ಸಂಚಿಗೊಳಿಸಿದ ಬಂಡವಾಳವೇ ಇದಕ್ಕೆ ಕಾರಣ. ಹೀಗಾಗಿ ನಮ್ಮ ಬಳಿ ಒಂದು ಖಚಿತ ದಾಖಲೆ ಇದೆ. ಸುಧಾರಣೆಯನ್ನು ಅಳವಡಿಸಿಕೊಂಡರೆ, ದೇಶದ ಆರ್ಥಿಕತೆಯನ್ನು ಮುಕ್ತವಾಗಿಸಿದರೆ, ಜಾಗತೀಕರಣಕ್ಕೆ ತೆರೆದುಕೊಂಡರೆ ನಾವು ಆರ್ಥಿಕವಾಗಿ ಸಬಲರಾಗುತ್ತೇವೆ ಎಂಬುದನ್ನು ನಮಗೆ ಆ ಅನುಭವ ಕಲಿಸಿಕೊಟ್ಟಿದೆ. ಈ ಅನುಭವವನ್ನು ನಾವು ಹೊಂದಿರುವುದರಿಂದ ಯಾಕೆ ನಾವು ಅದೇ ವಾದವನ್ನು ಪುನರಾವರ್ತಿಸುತ್ತಿದ್ದೇವೆ ಮತ್ತು ಪ್ರಮುಖ ಪರ್ಯಾಯ ಆರ್ಥಿಕತೆಯಾಗಿ ರೂಪ ತಳೆಯುವ ನಿಟ್ಟಿನಲ್ಲಿ ಯಾಕೆ ನಾವು ವಿಫಲವಾಗುತ್ತಿದ್ದೇವೆ?
ಪ್ರಶ್ನೆ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದೊಂದು ರಾಜಕೀಯ ಲೆಕ್ಕಾಚಾರವಾಗಿದೆಯೇ?
ಭಾರತದಲ್ಲಿ ಎಲ್ಲ ಸಮಯದಲ್ಲೂ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಭಾರತ-ಅಮೆರಿಕ ಅಣು ಒಪ್ಪಂದದ ಮಾತುಕತೆ ನಡೆಸುತ್ತಿದ್ದಾಗ, ಯಾವುದೇ ಪ್ರಗತಿ ಸಾಧಿಸುತ್ತಿದ್ದಂತೆಯೇ ಯಾರಾದರೂ ಬಂದು ಸದ್ಯಕ್ಕೆ ಇದನ್ನು ನಿಲ್ಲಿಸಿ. ನಮ್ಮಲ್ಲಿ ಚುನಾವಣೆ ನಡೆಯುತ್ತಿದೆ ಎನ್ನುತ್ತಿದ್ದರು. ರಾಜಕೀಯ ಎಂದಿಗೂ ಚುನಾವಣೆಯನ್ನು ಎದುರಿಸುತ್ತಲೇ ಇರುತ್ತದೆ. ಮೊದಲ ಅವಧಿಗಿಂತಲೂ ಎರಡನೇ ಅವಧಿಗೆ ಇನ್ನೂ ಹೆಚ್ಚು ಬಹುಮತವನ್ನು ಪಡೆದ ಸರ್ಕಾರವನ್ನು ನಾವು ಈಗ ಹೊಂದಿದ್ದೇವೆ. ಕೇವಲ ಜನಪ್ರಿಯವಷ್ಟೇ ಅಲ್ಲ, ದೇಶದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅಭೂತಪೂರ್ವ ಪ್ರಭಾವ ಹೊಂದಿರುವ ಪ್ರಧಾನಿಯನ್ನು ನಾವು ಹೊಂದಿದ್ದೇವೆ. ಈ ನಿರ್ಧಾರ ರಾಜಕೀಯವಾಗಿ ಅಪಾಯಕರ ಎನಿಸಿದರೂ, ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಅನುಕೂಲವೂ ಇದೆ.
ಪ್ರಶ್ನೆ: ಆದರೆ, ನಮ್ಮ ಪ್ರಗತಿಯ ಹಾದಿಯಲ್ಲಿ ಭಾರತವು ಅಂತಾರಾಷ್ಟ್ರೀಯ ನಿಟ್ಟಿನಲ್ಲಿ ಎಷ್ಟು ಪ್ರಮುಖವಾಗಿದೆ? 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದೇವೆ. ಆದರೆ, ನಮ್ಮ ಆರ್ಥಿಕತೆ ಕುಸಿತ ಕಾಣುತ್ತಿದ್ದು, ಪ್ರಗತಿ ದರಗಳನ್ನು ಇಳಿಸಲಾಗುತ್ತಿದೆ. ಇದು ನಮ್ಮ ವಿದೇಶಿ ನೀತಿಯ ಮೇಲೆ ಯಾವ ಪರಿಣಾಮವನ್ನು ಬೀರಬಲ್ಲದು?
ನಾವು ಪ್ರಗತಿ ದರವನ್ನು ಸುಧಾರಿಸದಿದ್ದರೆ, 2024 ರ ವೇಳೆಗೆ ಭಾರಿ ಆರ್ಥಿಕ ಸವಾಲನ್ನು ಎದುರಿಸಬೇಕಾಗುತ್ತದೆ ಎಂದು ನೀತಿ ಆಯೋಗ ತನ್ನ ವರದಿಯಲ್ಲಿ ಎಚ್ಚರಿಸಿದೆ. ಆರ್ಥಿಕತೆ ವಿಚಾರದಲ್ಲಿ ಉತ್ತಮ ಸ್ಥಿತಿಯಲ್ಲಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಕೆಲವು ವಿದೇಶೀ ನಿಲುವುಗಳನ್ನು ನಾವು ತಳೆಯಲು ನಮ್ಮ ಆರ್ಥಿಕತೆಯೇ ಆಧಾರವಾಗಿದೆ. ಇದು ಎಲ್ಲ ಸಂಗತಿಗಳಿಗೂ ಅಡಿಪಾಯ. ಪ್ರಮುಖ ಶಕ್ತಿಯಾಗಿ ಭಾರತ ವಿಶ್ವಾಸಾರ್ಹತೆಯನ್ನು ಪಡೆದಿರುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿರುವುದು ಆರ್ಥಿಕತೆ ತ್ವರಿತವಾಗಿ ಪ್ರಗತಿ ಕಾಣುತ್ತಿರುವುದರಿಂದ ಎಂಬುದು ಹೊಸ ಸಂಗತಿಯೇನಲ್ಲ. ಆರ್ಥಿಕತೆ ಉತ್ತಮವಾಗಿದ್ದರೆ ವಿಶ್ವದ ಇತರ ಪ್ರಮುಖ ಶಕ್ತಿಗಳು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದುತ್ತವೆ. ಇದೇ ಕಾರಣಕ್ಕೆ ನಮಗೆ ರಾಜತಾಂತ್ರಿಕ ಪ್ರಾಮುಖ್ಯತೆಯೂ ಸಿಕ್ಕಿದೆ. ಈ ದೃಷ್ಟಿಕೋನದಿಂದಲೇ ನಾವು ಭಾರತ-ಅಮೆರಿಕ ಅಣ್ವಸ್ತ್ರ ಒಪ್ಪಂದವನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಾಯಿತು. ಭಾರತ ಮತ್ತು ಚೀನಾ ಮಧ್ಯೆ ಅಂತರವಿದೆ. ಆದರೆ ಭಾರತವು ಇದನ್ನು ತುಂಬಾ ಬೇಗ ಕಡಿಮೆ ಮಾಡಿಕೊಳ್ಳುತ್ತಿದೆ. ತನ್ನ ಆರ್ಥಿಕ ಮತ್ತು ವಾಣಿಜ್ಯಿಕ ಅವಕಾಶಗಳಿಂದಾಗಿ ಭಾರತವು ಮತ್ತೊಂದು ಚೀನಾ ಆಗಬಹುದು. 2004 ರಲ್ಲಿ ಸುನಾಮಿಗೆ ನಾವು ಪ್ರತಿಕ್ರಿಯಿಸಿದ ರೀತಿ ನೋಡಿ. ಅಮೆರಿಕ ಅತವಾ ಇತರ ಪ್ರಮುಖ ದೇಶಗಳು ಎಚ್ಚೆತ್ತುಕೊಳ್ಳುವ ಮೊದಲೇ ನಾವು ಪರಿಹಾರ ಸಾಮಗ್ರಿಗಳನ್ನು ನಮ್ಮ ನೌಕಾ ಪಡೆಯ ಮೂಲಕ ಸಾಗಿಸಿದ್ದೆವು. ನೈಜ ಸಾಮರ್ಥ್ಯವನ್ನು ಹೊಂದಿರುವ ದೇಶ ಇದು ಎಂಬುದಾಗ ವಿಶ್ವಾದ್ಯಂತ ಹೆಸರನ್ನು ಇದು ತಂದುಕೊಟ್ಟಿತು. ಹೀಗಾಗಿ ಇದು ಸಾರ್ವಜನಿಕರಿಗೆ ಉತ್ತಮ ಕೆಲಸ ಮಾಡಬಲ್ಲದು. ಅಷ್ಟೇ ಅಲ್ಲ, ಪಾಕಿಸ್ತಾನದ ಕಡೆಗಿದ್ದ ಮೃದು ನಿಲುವೂ ಇದರಿಂದ ಹೊರಟು ಹೋಯಿತು. ಭಾರತಕ್ಕೆ ಅಣು ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಯಿತು. ಆದರೆ ಪಾಕಿಸ್ತಾನದ ವಿಚಾರದಲ್ಲಿ ಅದರ ಬಗ್ಗೆ ಯೋಚನೆಯನ್ನೂ ಮಾಡಲು ಸಾಧ್ಯವಿಲ್ಲ.
ಪ್ರಶ್ನೆ: ಆದರೆ ಈ ಮೃದು ನಿಲುವು ಪಾಕಿಸ್ತಾನದ ವಿಚಾರದಲ್ಲಿ ಮುಗಿದಿದೆಯೇ? ಕಾಶ್ಮೀರದಲ್ಲಿ 370ನೇ ವಿಧಿ ಮತ್ತು ಅದರ ನಂತರದಲ್ಲಿ ನಡೆದ ಬೆಳವಣಿಗೆಯ ದೃಷ್ಟಿಕೋನದಿಂದ ನಿಮ್ಮ ಅಭಿಪ್ರಾಯವೇನು?
ಪ್ರಾಮಾಣಿಕವಾಗಿ ಹೇಳುವುದಾದರೆ, ಪಾಕಿಸ್ತಾನದ ಕಡೆಗೆ ಈ ಮೃದುನಿಲುವು ಮತ್ತೆ ಕಾಣಿಸುತ್ತಿದೆ.
ಪ್ರಶ್ನೆ: ಭಾರತವು ಭಯೋತ್ಪಾದನೆ ಮತ್ತು ಪಾಕಿಸ್ತಾನದ ವಿಚಾರವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತಿರುವುದು ಪ್ರತಿಕೂಲ ಪರಿಣಾಮ ಬೀರುತ್ತಿವೆಯೇ?
ಪಾಕಿಸ್ತಾನದ ಬಗ್ಗೆ ನೀವು ಹೆಚ್ಚು ಮಾತನಾಡಿದಷ್ಟೂ, ಇದರ ಬಗ್ಗೆ ಮಾತನಾಡಲು ಇತರರಿಗೂ ಅವಕಾಶ ಮಾಡಿಕೊಡುತ್ತೀರಿ. ಇದರಿಂದ ನೀವು ಪಾರಾಗುವುದು ಹೇಗೆ?
ಪಾಕಿಸ್ತಾನದೊಂದಿಗಿನ ಸಂಬಂಧಕ್ಕೆ ಎಷ್ಟು ಪ್ರಾಮುಖ್ಯವನ್ನು ನೀವು ನೀಡುತ್ತೀರಿ ಎಂಬುದರ ಮೇಲೆ ಇತರರು ನಿಮ್ಮನ್ನು ಹೇಗೆ ನೋಡುತ್ತಾರೆ ಎಂಬುದೂ ಅವಲಂಬಿಸಿದೆ. ನಮ್ಮ ಸವಾಲು ನಿಜವಾಗಿಯೂ ಚೀನಾ. ಪಾಕಿಸ್ತಾನ ಅಪಾಯಕಾರಿ ಎಂದು ನಮಗೆ ಅನಿಸಿರೆ, ಅದು ಚೀನಾದೊಂದಿಗೆ ಸಂಬಂಧ ಹೊಂದಿದೆ ಎಂಬ ಕಾರಣಕ್ಕೆ ಮಾತ್ರ. ಪಾಕಿಸ್ತಾನದಿಂದಲೇ ನಮಗೆ ಯಾವ ಭೀತಿಯೂ ಇಲ್ಲ. ಭಾರತಕ್ಕೆ ಅತ್ಯಂತ ಆತಂಕಕ್ಕೆ ಕಾರಣವಾಗಿರುವ ಭಯೋತ್ಪಾದನೆ, 30 ವರ್ಷಗಳಿಂದಲೂ ಗಡಿಯಲ್ಲಿ ಗುಂಡಿನ ದಾಳಿಯ ಮೂಲಕ ತಂಟೆ ಮಾಡುತ್ತಿರುವ ವಿಚಾರದ ಮಧ್ಯೆಯೂ ಭಾರತವನ್ನು ಪ್ರಮುಖ ಆರ್ಥಿಕತೆಯನ್ನಾಗಿ ತಡೆಯಲು ಪಾಕಿಸ್ತಾನಕ್ಕೆ ಸಾಧ್ಯವಾಯಿತೇ? ಭಾರತದ ಆರ್ಥಿಕ ಕಾರ್ಯಕ್ಷಮತೆಗೆ ಯಾವ ರೀತಿಯಲ್ಲಾದರೂ ಪಾಕಿಸ್ತಾನವು ಹಿನ್ನಡೆ ಉಂಟು ಮಾಡಲು ಸಾಧ್ಯವಾಯಿತೇ? ಇಲ್ಲ. ಆದರೆ ಪಾಕಿಸ್ತಾನವನ್ನೇ ಅದು ಅಳಿಸಿಹಾಕುತ್ತಿದೆ. ದಿನದಿಂದ ದಿನಕ್ಕೆ ಪಾಕಿಸ್ತಾನ ಕುಸಿಯುತ್ತಲೇ ಇದೆ. ಭಯೋತ್ಪಾದನೆಯ ಬಗ್ಗೆ ನಮ್ಮ ಆತಂಕವು ಒಟ್ಟಾರೆ ದೃಷ್ಟಿಕೋನವನ್ನು ಆಧರಿಸಿರಬೇಕು.
ಪ್ರಶ್ನೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರದ ಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳುವ ಭಾರತದ ರಾಜತಾಂತ್ರಿಕ ಸವಾಲನ್ನು ನೀವು ಹೇಗೆ ನೋಡುತ್ತೀರಿ? ಜರ್ಮನ್ ಚಾನ್ಸಲರ್ ಮೆರ್ಕೆಲ್ ಮತ್ತು ಫಿನ್ಲೆಂಡ್ ಸರ್ಕಾರಗಳು ತೀಕ್ಷ್ಣ ಪ್ರತಿಕ್ರಿಯೆ ನೀಡಿವೆ. ಮುಂದಿನ ಹದಿನೈದು ದಿನಗಳಲ್ಲಿ ಅಮೆರಿಕದ ಸಂಸತ್ತಿನಲ್ಲಿ ಎರಡು ವಿಚಾರಣೆಗಳೂ ಈ ಬಗ್ಗೆ ನಡೆಯಲಿವೆ.
ಕಾಶ್ಮೀರ ಸಹಜ ಸ್ಥಿತಿಗೆ ಶೀಘ್ರವಾಗಿ ಮರಳದಿದ್ದರೆ ಇದೊಂದು ದೊಡ್ಡ ಸಮಸ್ಯೆಯಾಗಲಿದೆ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸಂಪೂರ್ಣ ಸಹಜವಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಆದರೆ ಇದು ಕಣಿವೆಯಲ್ಲಿನ ನಿಜವಾದ ಸನ್ನಿವೇಶವಲ್ಲ ಎಂದು ನಾನು ಭಾವಿಸುತ್ತೇನೆ. 100 ದಿನಗಳ ನಂತರವೂ ಇಂಟರ್ನೆಟ್ ಸೌಲಭ್ಯವನ್ನು ನೀವು ಹೊಂದಿಲ್ಲ, ಮೊಬೈಲ್ ಫೋನ್‌ಗಳ ಬಳಕೆಯಲ್ಲಿ ನಿರ್ಬಂಧಗಳನ್ನು ಹೊಂದಿದ್ದೀರಿ, ಪ್ರಮುಖ ರಾಜಕಾರಣಿಗಳು ಬಂಧನದಲ್ಲಿದ್ದಾರೆ ಮತ್ತು ರಾಜಕೀಯ ಪಕ್ಷಗಳಿಗೆ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಅವಕಾಶವಿಲ್ಲ. ಅಷ್ಟೇ ಅಲ್ಲ, ಇತರ ರಾಜ್ಯಗಳೊಂದಿಗೆ ಜಮ್ಮು-ಕಾಶ್ಮೀರದ ಸ್ಥಿತಿಯನ್ನು ನೀವು ಹೋಲಿಕೆ ಮಾಡಿದರೆ, ಪರಿಸ್ಥಿತಿ ಸಹಜವಾಗಿದೆ ಎಂಬುದನ್ನು ನಾನು ಭಾವಿಸುವುದಿಲ್ಲ. ಮುಂದಿನ ಕೆಲವು ತಿಂಗಳುಗಳಲ್ಲಿ ಪರಿಸ್ಥಿತಿ ಸುಧಾರಿಸಿದರೆ, ನಾವೆಲ್ಲ ತಿಳಿದಿರುವ ರೀತಿಯ ಸಹಜ ಸ್ಥಿತಿ ಕಂಡುಬಂದರೆ ಜರ್ಮನಿ ಅಥವಾ ಅಮೆರಿಕ ವ್ಯಕ್ತಪಡಿಸಿರುವ ಆತಂಕಗಳು ದೂರಾಗಲಿವೆ. ಆದರೆ ಮುಂದಿನ ಕೆಲವು ತಿಂಗಳುಗಳಲ್ಲಿ ಪರಿಸ್ಥಿತಿ ಸುಧಾರಿಸದೇ ಇದ್ದರೆ, ನಮ್ಮ ಮಿತೃ ರಾಷ್ಟ್ರಗಳಿಂದಲೂ ಹೆಚ್ಚಿನ ಮಾತುಗಳು ಕೇಳಿಬರಬಹುದು.
ಪ್ರಶ್ನೆ: ಭಾರತ-ಅಮೆರಿಕದ ವ್ಯಾಪಾರ ಒಪ್ಪಂದಕ್ಕೆ ಅಡ್ಡಿಯಾಗಿರುವುದೇನು ಮತ್ತು ಇದು ದ್ವಿಪಕ್ಷೀಯ ಸಂಬಂಧದ ಮೇಲೆ ಎಷ್ಟು ಪರಿಣಾಮ ಬೀರಬಹುದು?
ಭಾರತ-ಅಮೆರಿಕ ಸಂಬಂಧದ ಅತ್ಯಂತ ಕ್ಷೀಣ ಅಂಶವೆಂದರೆ ಅದು ಆರ್ಥಿಕ ವಿಚಾರ. ಭದ್ರತೆ, ರಾಜಕೀಯ ವಿಚಾರಗಳಲ್ಲಿ ನಮ್ಮ ಸಂಬಂಧ ಉತ್ತಮವಾಗಿದೆ. ಅತ್ಯಂತ ಅಂತರ ಕಾಯ್ದುಕೊಳ್ಳುವ ಅಮೆರಿಕ ಕೂಡ ಭಾರತದೊಂದಿಗೆ ಸಂಬಂಧ ನಿರ್ಮಾಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ವ್ಯಾಪಾರ ಸಂಬಂಧ ಸುಧಾರಣೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ನಾನು ಸ್ವಾಗತಿಸುತ್ತೇನೆ. ನಾವು ಆರ್‌ಸಿಇಪಿಯನ್ನು ಒಪ್ಪಿಕೊಳ್ಳದೇ ಇದ್ದರೆ ಅಮೆರಿಕದೊಂದಿಗೆ ಎಫ್‌ಟಿಎ ಯಲ್ಲಿ ಸೇರುವ ನಮ್ಮ ಸಾಮರ್ಥ್ಯವೇ ಕ್ಷೀಣವಾಗಲಿದೆ ಎಂದು ನಾನು ಭಾವಿಸುತ್ತೇನೆ.
ಪ್ರಶ್ನೆ: ಇತರ ಎಫ್‌ಟಿಎಗಳನ್ನು ರದ್ದುಗೊಳಿಸಲಾಗುತ್ತಿದೆ ಅಥವಾ ಮರುಪರಿಶೀಲನೆ ನಡೆಸಲಾಗುತ್ತಿದೆ.
ಅವುಗಳನ್ನು ರದ್ದುಗೊಳಿಸುವುದಲ್ಲ. ಆದರೆ ಕೆಲವು ಎಫ್‌ಟಿಎಗಳ ಕುರಿತು ನಮಗೆ ಆಕ್ಷೇಪಗಳಿವೆ. ವಿವಿಧ ವ್ಯಾಪಾರ ಒಪ್ಪಂದಗಳಿಗೆ ಗಮನಿಸಿದರೆ ಆರ್‌ಸಿಇಪಿ ಅತ್ಯಂತ ಕಡಿಮೆ ನಿರೀಕ್ಷೆಯನ್ನು ಬಯಸುವ ಕಡಿಮೆ ಗುಣಮಟ್ಟದ ಒಪ್ಪಂದವಾಗಿದೆ. ಕೇವಲ ತೆರಿಗೆ ಇಳಿಕೆ, ಪರಿಸರ, ಆರೋಗ್ಯ ಮತ್ತು ಇತರೆಯಲ್ಲಿ ಉನ್ನತ ಮಾನದಂಡಕ್ಕೆ ಬದ್ಧವಾಗುವ ನಿಟ್ಟಿನಲ್ಲಿಯೂ ಇದು ಕಡಿಮೆ ಗುಣಮಟ್ಟದ್ದಾಗಿದೆ. ವ್ಯಾಪಾರದಲ್ಲಿ ಇಂದು ಕೇವಲ ತೆರಿಗೆಯದ್ದಲ್ಲ, ಗುಣಮಟ್ಟದ ಆಟ ನಡೆಯುತ್ತಿದೆ. ನಮ್ಮ ಮಾನದಂಡವನ್ನು ಹೆಚ್ಚಿಸಲು ನಾವು ಹೂಡಿಕೆ ಮಾಡಲು ಬಯಸುತ್ತಿಲ್ಲ. ಆರ್‌ಸಿಇಪಿಯ ಕಡಿಮೆ ಮಟ್ಟದಲ್ಲಿ ನಾವು ಇದನ್ನು ಪೂರೈಸಲು ಸಾಧ್ಯವಾಗದಿದ್ದರೆ, ಉನ್ನತ ಮಾನದಂಡಗಳನ್ನು ಬಯಸುವ ಅಮೆರಿಕದಂತಹ ದೊಡ್ಡ ದೇಶಗಳೊಂದಿಗೆ ಎಫ್‌ಟಿಎ ಮಾಡಿಕೊಳ್ಳುವಾಗ ಪೂರೈಸಲು ಸಾಧ್ಯವಾಗುವುದು ಅನುಮಾನ. ಕೆಲವು ಸಂಗತಿಗಳನ್ನು ನಾವು ಪುನಃ ಪರಿಶೀಲನೆ ನಡೆಸಬೇಕು. ಆರ್‌ಸಿಇಪಿಯಲ್ಲಿ ರಿಯಾಯಿತಿಗಳನ್ನು ನೀವು ಮಾಡುವ ಕುರಿತು ಯೋಚನೆ ಮಾಡದಿದ್ದರೆ, ಅಮೆರಿಕದಿಂದ ನಾನು ಉತ್ತಮ ರಿಯಾಯಿತಿಗಳನ್ನು ತರುತ್ತೇನೆ ಅಥವಾ ಐರೋಪ್ಯ ಒಕ್ಕೂಟದ ಜೊತೆಗೆ ಉತ್ತಮ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಮಾಡುತ್ತೇವೆ ಮತ್ತು ಉತ್ತಮ ಡೀಲ್ ಕುದುರಿಸುತ್ತೇವೆ ಎಂದು ಹೇಳಲಾಗದು.
ಯಾಕೆಂದರೆ ಈ ದೇಶಗಳ ಮಾರುಕಟ್ಟೆಯಲ್ಲಿ ಆರ್‌ಸಿಇಪಿ ಬಯಸುವುದಕ್ಕಿಂತ ಹೆಚ್ಚಿನ ಗುಣಮಟ್ಟವನ್ನು ನಿರೀಕ್ಷಿಸಲಾಗುತ್ತದೆ. ಇಡೀ ವಿಶ್ವವೇ ದರದ ಬಗ್ಗೆ ತಲೆಕೆಡಿಸಿಕೊಳ್ಳದೇ, ಗುಣಮಟ್ಟವನ್ನು ನೋಡುತ್ತ ಇದ್ದರೂ ನಾವು ಇನ್ನೂ ತೆರಿಗೆ ದರಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದೇವೆ. ನಾವು ಅತಿದೊಡ್ಡ ಮಾರುಕಟ್ಟೆ, ವಿಶ್ವಕ್ಕೆ ಪರ್ಯಾಯವೇ ಇಲ್ಲ ಎಂಬ ಭಾವವು ಸಂಪೂರ್ಣ ತಪ್ಪು. ಉದಾಹರಣೆಗೆ, ಬಹುತೇಕ ಜವಳಿ ವ್ಯಾಪಾರವು ಚೀನಾದಿಂದ ಕಾಲ್ಕಿತ್ತಿದೆ. ಯಾಕೆಂದರೆ ಅಲ್ಲಿ ಕೂಲಿ, ವೆಚ್ಚ ಹೆಚ್ಚಾಗಿದೆ ಮತ್ತು ಅಲ್ಲಿ ಕೆಲಸ ಮಾಡುತ್ತಿರುವ ಕೆಲವು ವಿದೇಶಿ ಕಂಪನಿಗಳ ಕಾರಣದಿಂದ ಈ ಬದಲಾವಣೆ ಉಂಟಾಗಿದೆ.
ಆದರೆ ಉದ್ಯಮ ಎಲ್ಲಿಗೆ ಹೋಯಿತು? ಭಾರತಕ್ಕೆ ಬರುತ್ತಿದೆಯೇ? ಮೊದಲ ಆದ್ಯತೆಯಲ್ಲಿ ಅವೆಲ್ಲವೂ ವಿಯೆಟ್ನಾಮ್‌ಗೆ ಹೋಗುತ್ತಿವೆ. ಇನ್ನೂ ಕೆಲವು ಬಾಂಗ್ಲಾದೇಶಕ್ಕೆ ಹೋಗುತ್ತಿವೆ. ವಿದೇಶಿ ಹೂಡಿಕೆದಾರರು ಅಥವಾ ಪಾಲುದಾರರಿಗೆ ಪರ್ಯಾಯವಿಲ್ಲ ಎಂದು ಭಾವಿಸುವುದು ತಪ್ಪು. ನೀವು ಒಟ್ಟಾಗಿ ಕೆಲಸ ಮಾಡಬೇಕು. ಆರ್ಥಿಕತೆಯಾಗಿ ನೀವು ಹೆಚ್ಚು ಸ್ಫರ್ಧಾತ್ಮಕವಾಗಿದ್ದರೆ ಮತ್ತು ನಿಮ್ಮ ಆರ್ಥಕತೆಯ ಗಾತ್ರ ದೊಡ್ಡದಿದ್ದರೆ ಹಾಗೆ ಭಾವಿಸಬಹುದು. ಮುಂದಿನ 20-30 ವರ್ಷಗಳವರೆಗೆ ಪ್ರಗತಿ ಉತ್ತೇಜನಕ್ಕೆ ನೀವು ಅದನ್ನು ಬಳಸದೇ ಇದ್ದರೆ, ಭೌಗೋಳಿಕ ವೈವಿಧ್ಯದ ಅನುಕೂಲವನ್ನು ಪಡೆಯದೇ ಇದ್ದರೆ, ವಾರ್ಷಿಕವಾಗಿ ಶೇ. 8-10ರ ವೇಗದಲ್ಲಿ ಪ್ರಗತಿ ಸಾಧ್ಯವಿಲ್ಲ. ನಿಮ್ಮ ಆರ್ಥಿಕತೆ ಕುಸಿದಾಗ ಅದು ಸಾಧ್ಯವಿಲ್ಲ.
ಪ್ರಶ್ನೆ: ಎನ್ಆರ್‌ಸಿ ಕುರಿತು ನಡೆಯುತ್ತಿರುವ ದೇಶದೊಳಗಿನ ರಾಜಕೀಯವು ಬಾಂಗ್ಲಾದೇಶದ ಜೊತೆಗಿನ ಸಂಬಂಧಕ್ಕೆ ಯಾವ ರೀತಿ ಬಾಧಿಸುತ್ತಿದೆ? ಬಾಂಗ್ಲಾದೇಶದ ಮಾಜಿ ಹೈಕಮಿಷನರ್ ಭಾರತದ ವಿರುದ್ಧ ಕೆಲವು ತೀಕ್ಷ್ಣ ಟೀಕೆ ಮಾಡಿದ್ದಾರೆ.
ಭಾರತದಲ್ಲಿ ಅಕ್ರಮ ವಲಸಿಗರು ಎಂದು ಘೋಷಿಸಲ್ಪಟ್ಟಿರುವವರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸುವುದಿಲ್ಲ ಎಂದು ಬಾಂಗ್ಲಾದೇಶಕ್ಕೆ ಭರವಸೆ ನೀಡಲಾಗಿದೆ. ಇದು ದೇಶೀಯ ಸಮಸ್ಯೆಯಾಗಿದ್ದು, ಇದು ಬಾಂಗ್ಲಾದೇಶದ ಜೊತೆಗಿನ ಸಂಬಂಧದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದು ಹೇಳುತ್ತಿದ್ದರೂ, ಇದು ಪರಿಣಾಮ ಬೀರುತ್ತದೆ. ನಾವು ಇಲ್ಲಿ ಆಡುವ ಮಾತುಗಳು ಇನ್ನೊಂದು ಬದಿಯಲ್ಲಿರುವವರಿಗೆ ಪರಿಣಾಮ ಬೀರುವುದಿಲ್ಲ ಎಂಬುದು ವಾಸ್ತವವಲ್ಲ. ಬಾಂಗ್ಲಾದೇಶದ ಮಾಜಿ ರಾಯಭಾರಿ ಹೇಳಿರುವುದು ಮತ್ತು ಬಾಂಗ್ಲಾದೇಶದ ಹೇಳಿಕೆಗಳು ವಾಸ್ತವ. ನಾವು ಈವರೆಗೆ ಬಾಂಗ್ಲಾದೇಶದ ಜೊತೆಗೆ ಬೆಳೆಸಿದ ಸಂಬಂಧದಲ್ಲಿ ಪ್ರಸ್ತುತ ಪ್ರಧಾನಿ ಹಸೀನಾ ಅವರ ಪರಿಶ್ರಮ ತುಂಬಾ ಇದೆ. ಹೀಗಾಗಿ ಯಾವುದೇ ಇತರ ಬಾಂಗ್ಲಾದೇಶಿ ನಾಯಕರು ಅವರ ಸ್ಥಾನವನ್ನು ಕಬಳಿಸುವಂತೆ ನಾವು ಕ್ರಮ ತೆಗೆದುಕೊಳ್ಳಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಪ್ರಶ್ನೆ: ಜಮ್ಮು ಮತ್ತು ಕಾಶ್ಮೀರ ವಿಭಜನೆಯ ನಂತರ ಭಾರತ ಬಿಡುಗಡೆ ಮಾಡಿದ ಹೊಸ ರಾಜಕೀಯ ನಕ್ಷೆಯಲ್ಲಿ ಕಾಲಾಪಾನಿ ಕಾಣಿಸಿಕೊಂಡಿರುವುದು ನೇಪಾಳದೊಂದಿಗೆ ವಿವಾದಕ್ಕೆ ಕಾರಣವಾಗಿದೆ. ಕೆಲವು ವರ್ಷಗಳ ಹಿಂದೆ ನಡೆದ ಆರ್ಥಿಕ ತಡೆಯ ಬಗ್ಗೆ ನೇಪಾಳೀಯರು ಈಗಲೂ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರವನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?
ನೇಪಾಳಿ ಜನರಲ್ಲಿ ಈ ಮಟ್ಟಿಗೆ ಯಾಕೆ ಆಕ್ರೋಶವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಷ್ಟದ ಸಂಗತಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಡಿದ ಬದಲಾವಣೆಗಳನ್ನು ಪ್ರತಿಬಿಂಬಿಸಲು ಈ ನಕ್ಷೆಯನ್ನು ಬಿಡುಗಡೆ ಮಾಡಿದ್ದು, ನೇಪಾಳಕ್ಕೆ ಇದು ಯಾವ ಸಂಬಂಧವನ್ನೂ ಹೊಂದಿಲ್ಲ. ಭಾರತ-ನೇಪಾಳ ಗಡಿ ವಿಚಾರದಲ್ಲಿ, ಈ ಹಿಂದಿನ ಎಲ್ಲ ನಕ್ಷೆಗಳಿಗಿಂತ ವಿಭಿನ್ನವಾದದ್ದೇನೂ ಇದರಲ್ಲಿಲ್ಲ. ನೇಪಾಳದ ಯಾವ ಪ್ರದೇಶವನ್ನೂ ತನ್ನದು ಎಂದು ನಕ್ಷೆ ಹೇಳುತ್ತಿಲ್ಲ. ಹಾಗಿದ್ದರೂ, ಯಾಕೆ ಈ ನಕ್ಷೆಗಳ ಕುರಿತು ಜನರು ಹಠಾತ್ತನೆ ಸಿಟ್ಟಾಗಿದ್ದಾರೆ. ಹಿಂದಿನ ಯಾವ ನಕ್ಷೆಯೂ ಭಿನ್ನವಾಗಿರಲಿಲ್ಲ. ಯಾಕೆ ಈ ನಕ್ಷೆ ಅವರಿಗೆ ಸಿಟ್ಟು ತರಿಸಬೇಕು? ಎರಡನೆಯದಾಗಿ, ಕಾಲಾಪಾನಿ ವಿಚಾರದಲ್ಲಿ ಹೇಳುವುದಾದರೆ, ಮೂಲದಲ್ಲಿ ಇದು ಸಣ್ಣ ಪ್ರಮಾಣದಲ್ಲಿ ನಕ್ಷೆಗಳಲ್ಲಿ ಕಾಣಿಸಿಕೊಂಡಿತ್ತು. ಈ ಹಿಂದೆ ಮ್ಯಾಕ್ಮೋಹನ್ ಲೈನ್ ಬಗ್ಗೆಯೂ ಇದೇ ಸಮಸ್ಯೆ ಇತ್ತು. ಇದನ್ನು ಮೊದಲು ದಪ್ಪ ಗೆರೆಯಿಂದ ನಮೂದಿಸಲಾಗಿತ್ತು. ಈಗ ಸಣ್ಣ ಗೆರೆಯಿಂದಾಗಿ ಮೇಲಿನ ಮತ್ತು ಕೆಳಗಿನ ಭಾಗಗಳ ಅಂತರವು ಸುಮಾರು 20 ಕಿಲೋಮೀಟರುಗಳಾಗಿವೆ. ಹೀಗಾಗಿ ಹಲವು ಕಡೆಗೆ ಈ ಲೈನ್ ಎಲ್ಲಿದೆ ಎಂಬ ಕುರಿತು ಗೊಂದಲ ಎದ್ದಿರುವುದು ಸಹಜ. ಮೊದಲು ಈ ಹಳೆಯ ಲೈನ್ ಇರಲಿಲ್ಲ.
ಪ್ರಶ್ನೆ: ಈ ನಕ್ಷೆ ವಿಭಿನ್ನವಾಗಿಲ್ಲದಿದ್ದರೆ, ಭಾರತ ಅತಿಕ್ರಮಿಸುತ್ತಿದೆ ಎಂಬ ಚಿತ್ರಣವನ್ನು ಬಿಂಬಿಸುತ್ತಿರುವವರು ಯಾರು?
ಇದು ಜನರ ಅಭಿಪ್ರಾಯಗಳನ್ನು ತನ್ನೆಡೆಗೆ ತಿರುಗಿಸಿಕೊಳ್ಳುವ ಒಂದು ವಿಧಾನ. ಇದನ್ನು ಮೊದಲು ಆರಂಭಿಸಿದ್ದು ಮಾವೋವಾದಿಗಳ ಗುಂಪು. ನಂತರ ಇತರ ಪಕ್ಷಗಳ ಜನರೂ ನಾವು ಅವರೊಂದಿಗೆ ಸೇರಿಕೊಳ್ಳದಿದ್ದರೆ ನಮ್ಮ ದೇಶ ಉಳಿಯುವುದಿಲ್ಲ ಎಂಬ ಭಾವವನ್ನು ಮೂಡಿಸಿದರು. ಹೀಗಾಗಿ ಇದು ದಿನದಿಂದ ದಿನಕ್ಕೆ ಬೆಳೆಯಿತು. ಇದು ಹಿಂದೆಯೂ ನಡೆದಿದೆ. ವಾಸ್ತವದಲ್ಲಿ ಭಾರತ-ನೇಪಾಳ ಗಡಿಯಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಈ ಹಿಂದೆ ಇದೇ ಸಮಸ್ಯೆಯನ್ನು ಪ್ರಸ್ತಾಪಿಸಿದಾಗ ನಾವು ಇದನ್ನು ನಿರ್ವಹಿಸಿದ್ದೇವೆ. ಇದನ್ನು ನಿರ್ವಹಿಸಲು ವಿದೇಶಾಂಗ ಕಾರ್ಯದರ್ಶಿ ಮಟ್ಟದ ವೇದಿಕೆ ಇದೆ. ಇದು ಇತ್ತೀಚಿನ ದಿನಗಳಲ್ಲಿ ಸಭೆ ಸೇರಿಲ್ಲ. ಈ ಸಮಸ್ಯೆಗಳನ್ನು ನಿರ್ವಹಿಸಲು ಭಾರತದ ಕಡೆಯಿಂದ ನಿರಾಕರಣೆ ಇಲ್ಲ. 2000 ನೇ ಇಸ್ವಿಯಲ್ಲಿ ನೇಪಾಳ ಸ್ನೇಹ ಒಪ್ಪಂದವನ್ನು ಪ್ರಧಾನಿ ಮಟ್ಟದಲ್ಲಿ ಪ್ರಸ್ತಾಪಿಸಲಾಗಿತ್ತು. ಇದು ಇಂದಿಗೂ ನೇಪಾಳದಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದೊಂದು ವಿಶೇಷ ಒಪ್ಪಂದ. ಇದನ್ನು ನಾವು ಪರಿಸ್ಕರಿಸಬೇಕು. ಇದನ್ನು ಪರಿಹರಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕೂ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಸಮಿತಿ ಮಾಡಲಾಗಿದ್ದು, ಇದು ಕೇವಲ ಒಮ್ಮೆ ಸಭೆ ಸೇರಿತ್ತು. ಆಗ ನಾವು ನೀವು ಕೆಲವು ಅನುಕೂಲವನ್ನು ಬಯಸುತ್ತೀರಿ ಎಂದಾದರೆ ಕೆಲವು ತ್ಯಾಗಗಳನ್ನು ನೀವೂ ಮಾಡಬೇಕಾಗುತ್ತದೆ ಎಂದು ನಾವು ಹೇಳಿದ್ದೆವು.
ಮೊದಲ ಭೇಟಿಯ ನಂತರ ಮತ್ತೆ ಸಭೆ ಸೇರಲೇ ಇಲ್ಲ. ನಾವು ಮಾತುಕತೆ ನಡೆಸಲು ಸಿದ್ಧವಿದ್ದೇವೆ ಮತ್ತು ಈ ಕುರಿತು ಭಾರಿ ಚರ್ಚೆ ನಡೆಸಲೂ ಸಿದ್ಧವಿದ್ದೇವೆ. ಆದರೆ ಅವರಿಗೆ ಮಾತುಕತೆ ಬೇಕಿಲ್ಲ. ಶೇ. 98 ರಷ್ಟು ಭಾರತ-ನೇಪಾಳ ಗಡಿ ವಿಚಾರ ಪರಿಹಾರ ಕಂಡಿದೆ. 180 ಕ್ಕೂ ಹೆಚ್ಚು ಪ್ರದೇಶಗಳ ಕುರಿತು ವಿಷದವಾಗಿ ಚರ್ಚೆ ನಡೆಸಿ ಎರಡೂ ದೇಶಗಳು ಒಪ್ಪಿಕೊಂಡಿವೆ. ಹೀಗಾಗಿ ಶೇ.98 ರಷ್ಟು ಸಮಸ್ಯೆ ಪರಿಹಾರವು ಒಂದು ಸಂಗತಿಯೇ ಅಲ್ಲ. ಕೇವಲ ಈ ಎರಡು ಸಂಗತಿಗಳನ್ನು ನೀವು ಪ್ರಸ್ತಾಪಿಸುತ್ತೀರಿ. ಸಸ್ತಾ ವಿಚಾರದಲ್ಲಿ ನದಿ ಹರಿವಿನ ದಿಕ್ಕು ಬದಲಾಗಿದೆ. ಆಗ ನೀವು ನದಿ ಪಾತ್ರಕ್ಕೆ ಸೀಮಿತವಾಗುತ್ತೀರಿ ಅಥವಾ ನದಿ ಹರಿವು ಹೇಗೇ ಇದ್ದರೂ, ಗಡಿ ಬದಲಾಗುವುದಿಲ್ಲ ಎಂದು ನಿರ್ಧರಿಸುತ್ತೀರಿ. ಇದನ್ನು ನೀವು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಇದು ಭಾರತ-ನೇಪಾಳ ವಿಚಾರದಲ್ಲಿ ಗಂಭೀರ ಸಮಸ್ಯೆ ಎಂದು ನಾನು ಭಾವಿಸುವುದಿಲ್ಲ. ಕೆಲವು ಕಾರಣಗಳಿಗೆ ನೇಪಾಳದ ರಾಜಕೀಯ ಶಕ್ತಿಗಳು ಇದನ್ನು ದೊಡ್ಡ ಸಂಗತಿಯನ್ನಾಗಿ ಮಾಡುತ್ತಿವೆ. ಇದೇನೂ ಹೊಸದಲ್ಲ.