ಥ್ರಿಸ್ಸುರ್ (ಕೇರಳ): ಕೇರಳದ ದಿ. ಸಿಸ್ಟರ್ ಮಾರಿಯಂ ಥ್ರೆಸಿಯಾ ಅವರಿಗೆ ಕ್ಯಾಥೊಲಿಕ್ ಕ್ರಿಶ್ಚಿಯನ್ನರ ಧರ್ಮಗುರು ಪೋಪ್ ಫ್ರಾನ್ಸಿಸ್ ಸಂತ ಪದವಿಯನ್ನು ಘೋಷಣೆ ಮಾಡಿದ್ದಾರೆ. ರೋಮ್ನ ವ್ಯಾಟಿಕನ್ ಸಿಟಿಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಈ ಗೌರವ ನೀಡಲಾಗಿದೆ.
ಥ್ರೆಸಿಯಾ ಅವರು ಕ್ರೈಸ್ತ ಸಮುದಾಯ ಮತ್ತು ಜನರ ಒಳಿತಿಗಾಗಿ ಸೇವೆ ಸಲ್ಲಿಸಿದ್ದರು. 1914ರಲ್ಲಿ ಕೇರಳದ ಪುಥೆಂಚಿರಾದಲ್ಲಿ ಜನಿಸಿದ್ದ ಇವರು, 1926ರ ಜೂನ್ 8ರಂದು, ತಮ್ಮ 50 ವರ್ಷ ವಯಸ್ಸಿನಲ್ಲಿ ನಿಧನರಾಗಿದ್ದರು. ಇನ್ನು, ಈ ಪದವಿ ಪಡೆದ ಕೇರಳದ ನಾಲ್ಕನೇ ವ್ಯಕ್ತಿ ಇವರಾಗಿದ್ದಾರೆ. ಇದಕ್ಕೂ ಮುನ್ನ ಸೇಂಟ್ ಅಲ್ಫೊನ್ಸ್, ಸೇಂಟ್ ಕುರಿಯಾಕೋಸ್ ಎಲಿಯಾಸ್ ಚವಾರ ಮತ್ತು ಸೇಂಟ್ ಯುಪ್ರೇಶಿಯಾ ಅವರಿಗೆ ಈ ಗೌರವ ಸಂದಿತ್ತು.
ಥ್ರೆಸಿಯಾ ಜೊತೆಗೆ, ಇಂಗ್ಲೆಂಡ್ನ ಕಾರ್ಡಿನಲ್ ಜಾನ್ ಹೆನ್ರಿ ನ್ಯೂಮನ್, ಸ್ವಿಡ್ಜರ್ಲೆಂಡ್ನ ಲೇವುಮನ್ ಮಾರ್ಗುರೈಟ್ ಬೇಸ್, ಬ್ರೆಜಿಲ್ನ ಸಿಸ್ಟರ್ ಡಲ್ಸ್ ಲೋಪ್ಸ್ ಮತ್ತು ಇಟಲಿಯ ಸಿಸ್ಟರ್ ಗೈಸೆಪ್ಪಿನಾ ವನ್ನಿನಿ ಅವರಿಗೂ ಕೂಡ ಸಂತ ಪದವಿ ನೀಡಲಾಗಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಕೂಡ ಸೆ. 29ರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸಿಸ್ಟರ್ ಮಾರಿಯಂ ಥ್ರೆಸಿಯಾ ಅವರಿಗೆ ಪೋಪ್ ಫ್ರಾನ್ಸಿಸ್ ಸಂತ ಪದವಿ ಘೋಷಣೆಯಾಗುವ ಬಗ್ಗೆ ಉಲ್ಲೇಖಿಸಿದ್ದರಲ್ಲದೆ, ಥ್ರೆಸಿಯಾರ ಸಮಾಜ ಸೇವೆ ಕುರಿತು ಕೊಂಡಾಡಿದ್ದರು.
ಮಾರಿಯಂ ಥ್ರೆಸಿಯಾ ಅವರಿಗೆ ಸಂತ ಪದವಿ ಲಭಿಸಿರುವ ಹಿನ್ನೆಲೆಯಲ್ಲಿ ಕೇರಳ ಕ್ಯಾಥೋಲಿಕ್ ಸಮುದಾಯದಲ್ಲಿ ಸಂಭ್ರಮ ಮನೆಮಾಡಿದೆ.