ಮಂಡಳಾ (ಮಧ್ಯಪ್ರದೇಶ): ಪ್ಲಾಸ್ಟಿಕ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜಗತ್ತಿನಾದ್ಯಂತ ಪ್ಲಾಸ್ಟಿಕ್ ತಡೆಗಟ್ಟಲು ದೊಡ್ಡ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಭಾರತದಲ್ಲೂ ಪ್ಲಾಸ್ಟಿಕ್ ಬಳಕೆ ತಡೆಯುವ ನಿಟ್ಟಿನಲ್ಲಿ ಸರ್ಕಾರಗಳು ಹಾಗೂ ಸಂಘ-ಸಂಸ್ಥೆಗಳು ಕಾರ್ಯನಿರತವಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ಲಾಸ್ಟಿಕ್ ಬಳಸದಂತೆ ಕರೆ ನೀಡಿದ್ದರು. ಇದರಿಂದ ಪ್ರೇರಣೆಗೊಂಡ ಲೇಖಕರೊಬ್ಬರು ಸಾಹಿತ್ಯ ಬರೆದು, ಹಾಡು ಕಟ್ಟಿ ಜಾಗೃತಿ ಮೂಡಿಸುತ್ತಿದ್ದಾರೆ.
ದೇಶದ ನಗರಗಳಷ್ಟೇ ಅಲ್ಲ, ಗ್ರಾಮ, ಕುಗ್ರಾಮಗಳೂ ಸಹ ವಿಷಕಾರಿ ಹಾಗೂ ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತುಂಬಿ ಗಬ್ಬೆದ್ದು ಹೋಗಿವೆ. ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರಕ ಅಂತಾ ಗೊತ್ತಿದ್ದರೂ ಕೂಡ ಈ ಬಗ್ಗೆ ಕಾಳಜಿ ವಹಿಸುವವರು ಕೆಲವೇ ಜನರು ಮಾತ್ರ. ನಿತ್ಯ ಬಳಕೆ ಹೆಚ್ಚಾಗಿದ್ದರಿಂದ ವಿಷಕಾರಿ ಪ್ಲಾಸ್ಟಿಕ್ನಿಂದಾಗಿ ನದಿಗಳು ಖಾಲಿಯಾಗುತ್ತಿವೆ, ಸಮೃದ್ಧ ಭೂಮಿ ಬರಡಾಗುತ್ತಿದೆ.
ಇತ್ತೀಚಿನ ಸರ್ವೆ ಪ್ರಕಾರ ತಿಳಿದಿರುವ ಅಚ್ಚರಿಯ ವಿಷಯವೆಂದ್ರೆ... ಸದ್ಯ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಈಡೀ ಜಗತ್ತನ್ನು ಮೂರು ಬಾರಿ ಮುಚ್ಚಬಹುದಂತೆ. ಈಗಾಗಲೇ ಭೂಮಿ ಮೇಲೆ ಅಷ್ಟೊಂದು ರಾಶಿರಾಶಿ ಪ್ಲಾಸ್ಟಿಕ್ ಹರಡಿಕೊಂಡಿದೆ. ಆದ್ರೆ ಇದನ್ನು ಕರಗಿಸಲು ಅಥವಾ ವಿಲೇವಾರಿ ಮಾಡಲು ಸಾಧ್ಯವಿಲ್ಲ. ಪರಿಣಾಮ ಇದು ಸಾವಿರಾರೂ ವರ್ಷ ಹಾಗೇ ಇರಲಿದೆ.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಪ್ಲಾಸ್ಟಿಕ್ ಬಳಸದಂತೆ ಗುಜರಾತ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕರೆ ನೀಡಿದ್ದರು. ಇದರಿಂದ ಮಧ್ಯಪ್ರದೇಶದ ಶ್ಯಾಮ್ ಬೈರಾಗಿ ಎಂಬ ಗಾಯಕ ಹಾಗೂ ಲೇಖಕರೊಬ್ಬರು ಪ್ರೇರಿತರಾಗಿ ಪ್ಲಾಸ್ಟಿಕ್ ಜಾಗೃತಿ ಕುರಿತು ಸಾಹಿತ್ಯ ಬರೆದು ಹಾಡಿದ್ದಾರೆ. ಶ್ಯಾಮ್ ಅವರು ಹಾಡಿರುವ 'ಗಾಡಿ ವಾಲಾ ಆಯಾ ಘರ್ ಸೆ ಕಚರಾ ನಿಕಾಲ್'.. ಹಾಡು ವೈರಲ್ ಆಗಿ ತಕ್ಕ ಮಟ್ಟಿಗೆ ಜಾಗೃತಿ ಮೂಡಿಸಿದೆ.
ಬೈರಾಗಿ ಅವರು ಈವರೆಗೆ ಒಟ್ಟು 36 ಹಾಡುಗಳನ್ನ ಕಟ್ಟಿದ್ದಾರೆ. ಇವರ ಎಲ್ಲ ಹಾಡುಗಳು ಸರ್ಕಾರದ ಯೋಜನೆ, ಅಭಿಯಾನಗಳ ಬಗ್ಗೆ ಇಲ್ಲವೇ ಗ್ರಾಮಗಳಲ್ಲಿ ರೋಗಗಳನ್ನ ತಡೆಯುವ ಕುರಿತು ಜಾಗೃತಿ ಮೂಡಿಸುತ್ತವೆ. ವಿನಾಶಕಾರಿ ಪ್ಲಾಸ್ಟಿಕ್ ವಿರುದ್ಧ ಯುದ್ಧ ಘೋಷಿಸದಿದ್ರೆ ಇಂಚು ಸ್ವಚ್ಛ ಭೂಮಿಗಾಗಿ ಜನ ಯುದ್ಧ ಮಾಡಬೇಕಾದ ಪರಿಸ್ಥಿತಿ ಬಹಳ ದೂರವಿಲ್ಲ ಅಂತಾರೆ ಶ್ಯಾಮ್ ಬೈರಗಿ.