ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಿನ್ನೆ ನಡೆದ ಪ್ರತಿಭಟನೆ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದು, ಸಾವಿರಾರು ಪ್ರತಿಭಟನಾಕಾರರು ಅಪಾರ ಪ್ರಮಾಣದ ಸರ್ಕಾರಿ ಆಸ್ತಿ ಹಾನಿ ಮಾಡಿದ್ದಾರೆ. ಅಲ್ಲದೆ ಪೊಲೀಸರ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ.
ಓದಿ: ಪ್ರತಿಭಟನಾಕಾರರಿಂದ ಪೊಲೀಸ್ ಜೀಪ್ಗಳ ಮೇಲೆ ದಾಳಿ: ವಿಡಿಯೋ ರಿಲೀಸ್
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್ ಅಧಿಕಾರಿ ಎಸ್ಎಚ್ಒ ಪಿ.ಸಿ.ಯಾದವ್, ಯಾವುದೇ ಕಾರಣಕ್ಕೂ ರೈತರ ಮೇಲೆ ಬಲಪ್ರಯೋಗ ಮಾಡದೇ ಇರಲು ನಾವು ನಿರ್ಧಾರ ಕೈಗೊಂಡಿದ್ದೇವು ಎಂದಿದ್ದಾರೆ.
ಹಲವು ಪ್ರತಿಭಟನಾಕಾರರು ಏಕಾಏಕಿ ಕೆಂಪುಕೋಟೆಗೆ ನುಗ್ಗಲು ಯತ್ನಿಸಿದಾಗ ನಾವು ಕರ್ತವ್ಯದಲ್ಲಿದ್ದೆವು. ಈ ವೇಳೆ ಅವರನ್ನು ಕೋಟೆಯಿಂದ ಹೊರಗಡೆ ಕಳುಹಿಸಲು ನಿರ್ಧರಿಸಿದ್ದೆವು. ಆದರೆ ಈ ವೇಳೆ ಅವರು ಆಕ್ರಮಣಕಾರಿಯಾಗಿ ವರ್ತನೆ ತೋರಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಪ್ರತಿಭಟನೆ ನಡೆಸಿದವರಲ್ಲಿ ಹಲವರು ಮದ್ಯಪಾನ ಮಾಡಿದ್ದರು ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.
ನಿನ್ನೆ ನಡೆದ ಹಿಂಸಾಚಾರದಲ್ಲಿ ಅನೇಕ ಪೊಲೀಸರು ಗಂಭೀರವಾಗಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಈಗಾಗಲೇ 22 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಕೆಂಪುಕೋಟೆಗೆ ಲಗ್ಗೆ ಹಾಕಿದ ಸಾವಿರಾರು ಜನರು ಬ್ಯಾರಿಕೇಡ್ ಕಿತ್ತು ಹಾಕಿ, ಪೊಲೀಸ್ ಜೀಪ್ಗಳನ್ನು ಧ್ವಂಸಗೊಳಿಸಿದ್ದಾರೆ. ಇದರ ಜತೆಗೆ ಕೋಟೆ ಮೇಲೆ ಖಾಲ್ಸಾ ಧ್ವಜ ಹಾರಿಸಿದ್ದಾರೆ.