ಮುಂಬೈ: ಕಳೆದೊಂದು ತಿಂಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾ ನಿನ್ನೆ ಕೊನೆಗೊಂಡಿದ್ದು, ಶಿವಸೇನೆಯ ಮುಖಂಡ ಉದ್ಧವ್ ಠಾಕ್ರೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ರಚನೆಯಾಗುತ್ತಿದ್ದಂತೆ ಇದೀಗ ಗೋವಾದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮೈತ್ರಿ ಮೇಲೆ ಕಣ್ಣು ಹಾಕಿರುವ ಶಿವಸೇನೆ ಅಲ್ಲಿ ಸಹ ಅತಿ ಶೀಘ್ರದಲ್ಲಿ ಪವಾಡ ನಡೆಯಲಿದೆ ಎಂದು ಹೇಳಿಕೆ ನೀಡಿದೆ.
ಶಿವಸೇನೆಯ ಪ್ರಮುಖ ಸಂಜಯ್ ರಾವತ್ ಮಾತನಾಡಿದ್ದು, ಗೋವಾ ಫಾರ್ವರ್ಡ್ ಪಾರ್ಟಿಯ ಅಧ್ಯಕ್ಷ ವಿಜಯ್ ಸರ್ದೇಸಾಯಿ ಸೇರಿದಂತೆ ನಾಲ್ವರು ಶಾಸಕರು ಶಿವಸೇನೆ ಜೊತೆ ಸಂಪರ್ಕದಲ್ಲಿದ್ದಾರೆ. ಗೋವಾದಲ್ಲಿ ಹೊಸ ರಾಜಕೀಯ ಮೈತ್ರಿ ರಚನೆಯಾಗಲಿದೆ. ಮಹಾರಾಷ್ಟ್ರದಲ್ಲಿ ಏನಾಯಿತೋ ಅದೇ ಆಗಲಿದೆ ಎಂದಿದ್ದಾರೆ. ಇದಾದ ಬಳಿಕ ಉಳಿದ ರಾಜ್ಯಗಳಲ್ಲೂ ಕಾಲಿಟ್ಟು ಬಿಜೆಪಿ ರಹಿತ ರಾಜಕಾರಣ ನಡೆಸಲು ಮುಂದಾಗುವುದಾಗಿ ರಾವತ್ ಹೇಳಿಕೆ ನೀಡಿದ್ದಾರೆ.
2017ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಬಿಜೆಪಿ ಗೋವಾ ಫಾರ್ವರ್ಡ್ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆ. ಬಿಜೆಪಿಯ ಮನೋಹರ್ ಪರಿಕ್ಕರ್ ಮೃತಪಟ್ಟ ನಂತರ ಪ್ರಮೋದ್ ಸಾವಂತ್ ಮುಖ್ಯಮಂತ್ರಿಯಾಗಿದ್ದು,. ಆದರೆ ಇದೀಗ ಮೈತ್ರಿ ಸರ್ಕಾರದ ನಡುವೆ ರಾಜಕೀಯ ಪರಿಸ್ಥಿತಿ ಸರಿಯಾಗಿಲ್ಲ.ಇದರ ಸದುಪಯೋಗ ಪಡೆದುಕೊಂಡು ಬಿಜೆಪಿ ಸರ್ಕಾರ ಗೋವಾದಲ್ಲೂ ಕೆಡವಲ್ಲೂ ಶಿವಸೇನೆ ಪ್ಲಾನ್ ರೂಪಿಸಿದೆ.