ಶಿರ್ಡಿ(ಮಹಾರಾಷ್ಟ್ರ): ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಮಾರ್ಚ್ನಿಂದಲೇ ದೇಶದ ಎಲ್ಲ ದೇವಸ್ಥಾನಗಳನ್ನು ಬಂದ್ ಮಾಡಲಾಗಿತ್ತು. ಅದೇ ರೀತಿ ಶಿರ್ಡಿ ಸಾಯಿಬಾಬಾ ದೇವಸ್ಥಾನ ಸಹ ಮಾ.17 ರಿಂದ ಬಂದ್ ಆಗಿತ್ತು. ಆದರೆ, ಈಗ ಕೇಂದ್ರ ಸರಕಾರದ ಹೊಸ ಮಾರ್ಗಸೂಚಿಯ ಪ್ರಕಾರ ಇಂದಿನಿಂದ ದೇಶದ ಹಲವಾರು ದೇವಸ್ಥಾನಗಳು ಭಕ್ತರ ದರ್ಶನಕ್ಕಾಗಿ ಬಾಗಿಲು ತೆರೆದಿವೆ.
ಇಷ್ಟಾದರೂ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಶಿರ್ಡಿ ಸಾಯಿಬಾಬಾ ದೇವಸ್ಥಾನ ತೆರೆಯುವ ಕುರಿತಾಗಿ ಮಹಾರಾಷ್ಟ್ರ ಸರಕಾರ ಯಾವುದೇ ನಿರ್ಧಾರ ತಳೆಯದಿರುವುದು ಭಕ್ತರಲ್ಲಿ ನಿರಾಸೆ ಮೂಡಿಸಿದೆ. ಮೊದಲಿಗೆ ಕನಿಷ್ಠ ಸ್ಥಳೀಯ ಭಕ್ತರ ದರ್ಶನಕ್ಕಾದರೂ ಸಾಯಿಬಾಬಾ ದೇವಸ್ಥಾನವನ್ನು ತೆರೆಯಬೇಕೆಂದು ಶಿರ್ಡಿ ಗ್ರಾಮಸ್ಥರು ಸರಕಾರಕ್ಕೆ ಈ ಮಧ್ಯೆ ಆಗ್ರಹಿಸಿದ್ದಾರೆ.
ದೇಶದ ಅತಿ ದೊಡ್ಡ ತಿರುಪತಿ ತಿಮ್ಮಪ್ಪನ ದೇವಸ್ಥಾನವು ಇಂದಿನಿಂದ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿದ್ದು, ಭಕ್ತರಲ್ಲಿ ಭಾರಿ ಸಂತಸ ಮೂಡಿಸಿದೆ. ಹಾಗೆಯೇ ದೇಶದ ಎರಡನೇ ಅತಿದೊಡ್ಡ ದೇವಸ್ಥಾನ ಎಂದು ಖ್ಯಾತಿ ಹೊಂದಿರುವ ಶಿರ್ಡಿ ಸಾಯಿಬಾಬಾ ದೇವಸ್ಥಾನವನ್ನು ಶೀಘ್ರ ತೆರೆಯಬೇಕೆಂದು ದೇಶಾದ್ಯಂತ ಒತ್ತಾಯ ಕೇಳಿ ಬರತೊಡಗಿದೆ.