ನವದೆಹಲಿ: ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರೋಧಿಸಿ ನವದೆಹಲಿಯ ಶಾಹಿನ್ ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಜೊತೆ ಮಾತನಾಡಲು ಸುಪ್ರೀಂಕೋರ್ಟ್ ಸರ್ಕಾರಿ ಮಧ್ಯಸ್ಥಿಕೆದಾರರ ನೇಮಿಸಿದೆ. ಈ ಕ್ರಮವನ್ನು ನಾವು ಸ್ವಾಗತಿಸುತ್ತೇವೆ ಆದರೆ ಪ್ರತಿಭಟನಾ ಜಾಗವನ್ನು ಬದಲಾಯಿಸುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರತಿಭಟನಾನಿರತ ಮಹಿಳೆಯೊಬ್ಬರು, ಸುಪ್ರೀಂಕೋರ್ಟ್ ಮಧ್ಯವರ್ತಿಗಳನ್ನು ನೇಮಕ ಮಾಡಿರುವ ಕ್ರಮವನ್ನು ಸ್ವಾಗತಿಸುತ್ತೇವೆ. ಈ ಬಗ್ಗೆ ಅವರೊಂದಿಗೆ ಚರ್ಚಿಸಿ ನಮ್ಮ ಸಮಸ್ಯೆಗಳನ್ನು ತಿಳಿಸುತ್ತೇವೆ. ಆದರೆ ನಮ್ಮ ಬೇಡಿಕೆಗಳು ಈಡೇರುವವರೆಗೂ ಇಲ್ಲಿಂದ ಹೋಗುವುದಿಲ್ಲ, ಸಿಎಎ ರದ್ದುಪಡಿಸಬೇಕೆಂಬುದು ನಮ್ಮ ಬಯಕೆ ಎಂದು ಪುನರುಚ್ಚರಿಸಿದ್ದಾರೆ.
ಶಹೀನ್ ಬಾಗ್‌ನಲ್ಲಿ ಪ್ರತಿಭಟನಾಕಾರರೊಂದಿಗೆ ಮಾತನಾಡಲು ಮತ್ತು ಅವರ ಪ್ರತಿಭಟನೆಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ,ಮನವೊಲಿಸಲು ಹಿರಿಯ ವಕೀಲರಾದ ಸಂಜಯ್ ಹೆಗ್ಡೆ, ಸಾಧನಾ ರಾಮಚಂದ್ರನ್ ಮತ್ತು ಮಾಜಿ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ ಅವರನ್ನು ಸುಪ್ರೀಂಕೋರ್ಟ್ ನೇಮಿಸಿ ವಿಚಾರಣೆಯನ್ನು ಫೆಬ್ರವರು 24ಕ್ಕೆ ಮುಂದೂಡಿದೆ.
ನಾವು ರಸ್ತೆ ತಡೆ ನಡೆಸುತ್ತಿಲ್ಲ, ಪ್ರತಿಭಟನೆ ಮಾಡುವುದು ಕಾನೂನುಬಾಹಿರವಲ್ಲ. ಸಿಎಎ ರದ್ದುಪಡಿಸುತ್ತೇವೆ, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಇರುವುದಿಲ್ಲ ಎಂದು ಸರ್ಕಾರ ಲಿಖಿತವಾಗಿ ನೀಡಬೇಕೆಂದು ನಾವು ಬಯಸುತ್ತೇವೆ ಎಂದು ಪ್ರತಿಭಟನಾಕಾರ ಜೋಗಿಂದರ್ ಶರ್ಮಾ ತಿಳಿಸಿದ್ದಾರೆ.
ನಾವು ಸುಮಾರು ಎರಡು ತಿಂಗಳುಗಳಿಂದ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈಗ ನಮ್ಮ ಬಗ್ಗೆ ಗಮನಹರಿಸಿದ್ದಾರೆ. ನಾವು ಈ ಸ್ಥಳವನ್ನು ಬಿಟ್ಟು ತೆರಳುವುದಿಲ್ಲ. ನಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ. ಸುಪ್ರೀಂಕೋರ್ಟ್ ಮೇಲೆ ನಂಬಿಕೆ ಇದ್ದು, ನಮ್ಮ ಬೇಡಿಕೆ ಈಡೇರುತ್ತದೆ ಎಂಬ ಭರವಸೆ ಇದೆ ಎಂದು ಮತ್ತೊಬ್ಬ ಮಹಿಳೆ ಹೇಳಿದ್ದಾರೆ.