ಅಹಮದಾಬಾದ್ : ನಾವು ಇಲ್ಲಿಗೆ ಬಂದಿರುವುದು ನಮ್ಮ ಅಧಿಕಾರವನ್ನು ನಿಮ್ಮೆದುರಿಗೆ ಪ್ರಚುರಪಡಿಸಲು ಅಲ್ಲ. ಇನ್ನು, ನಮ್ಮ ಮೈತ್ರಿಕೂಟ ಮತ್ತಷ್ಟು ಬಲಿಷ್ಠಗೊಂಡಿದೆ ಎಂದು ಶಿವಸೇನಾ ನಾಯಕ ಉದ್ದವ್ ಠಾಕ್ರೆ ಹೇಳಿದ್ದಾರೆ.
ಗಾಂಧಿನಗರದಲ್ಲಿ ಅಮಿತ್ ಶಾ ಅವರ ಉಮೇದುವಾರಿಕೆ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿವಸೇನಾ ಮತ್ತು ಬಿಜೆಪಿ ಒಂದಾಗಿ ಹೋರಟರೆ ನಮ್ಮನ್ನು ಸೋಲಿಸಲು ಪ್ರತಿಪಕ್ಷಗಳಿಗೆ ಅಸಾಧ್ಯ ಎಂದು ಘೋಷಿಸಿದರು.
ಶಿವಸೇನೆ ಬೆಂಬಲದಿಂದ ಬಿಜೆಪಿ ಮಹಾರಾಷ್ಟ್ರದಲ್ಲಿ ಏಕಾಂಗಿ ಸರ್ಕಾರ ರಚನೆ ಮಾಡಿದೆಯಾದರೂ ಎಲ್ಲವೂ ಸರಿ ಇರಲಿಲ್ಲ. ಬಿಜೆಪಿ ವಿರುದ್ಧ ಸದಾ ಹರಿಹಾಯುತ್ತಲೇ ಇದ್ದ ಉದ್ದವ್ ಠಾಕ್ರೆ ಏಕಾಂಗಿ ಸ್ಪರ್ಧೆ ಮಾಡುವ ಮಾತನಾಡಿದ್ದರು. ಪ್ರಮುಖ ನಿರ್ಧಾರಗಳ ಸಮಯದಲ್ಲಿ ಮೋದಿ ಸರ್ಕಾರದ ವಿರುದ್ಧ ನಡೆ ಅನುಸರಿಸಿದ್ದ ಶಿವಸೇನೆ ಜೊತೆ ಮೈತ್ರಿ ಸಾಧಿಸಲು ಮೋದಿ- ಶಾ ಯಶಸ್ವಿಯಾಗಿದ್ದರು.
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಉಭಯ ಪಕ್ಷಗಳು ಒಂದು ನಿರ್ಧಾರಕ್ಕೆ ಬಂದು ಸೀಟು ಹಂಚಿಕೆ ಸಹ ಮಾಡಿಕೊಂಡಿದ್ದವು. ಅದಾದ ಬಳಿಕ ಇದೇ ಮೊದಲ ಬಾರಿಗೆ ಉದ್ದವ್ ಠಾಕ್ರೆ, ಅಮಿತ್ ಶಾ ಜೊತೆ ಬಹಿರಂಗ ಸಮಾರಂಭದಲ್ಲಿ ಕಾಣಿಸಿಕೊಂಡು ಹೇಳಿಕೆ ನೀಡಿದ್ದಾರೆ.