ಮುಂಬೈ(ಮಹಾರಾಷ್ಟ್ರ): ಮುಂಬೈ ಮಹಾನಗರದ ವ್ಯಾಪ್ತಿಯಲ್ಲಿ ಜೂನ್ 30 ರೊಳಗೆ 10 ವರ್ಷದೊಳಗಿನ ಸುಮಾರು 1,311 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 7 ಮಕ್ಕಳು ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರೆತಿದೆ.
ಈ ವಿಷಯವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಚಿಕ್ಕ ಮಕ್ಕಳನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗದಂತೆ ಪೋಷಕರಿಗೆ ಸಲಹೆ ನೀಡಿದೆ.
ಮಹಾರಾಷ್ಟ್ರ ಅಥವಾ ಮುಂಬೈಯಲ್ಲಿ 0-10 ಮತ್ತು 10-20 ವರ್ಷದೊಳಗಿನ ರೋಗಿಗಳ ಸಾವಿನ ಬಗ್ಗೆ ಯಾವುದೇ ವರದಿ ಬಂದಿರಲಿಲ್ಲ. ಆದರೆ ಈಗ, ಮುಂಬೈ ಮಹಾನಗರ ಪಾಲಿಕೆ ನೀಡಿದ ಮಾಹಿತಿ ಪ್ರಕಾರ, 0-10 ವರ್ಷದೊಳಗಿನ 7 ಮಕ್ಕಳು ಕೊರೊನಾ ಸೋಂಕಿನಿಂದ ಜೂನ್ 30 ರೊಳಗೆ ಮೃತಪಟ್ಟಿದ್ದಾರೆ. ಇನ್ನು, 10-20 ವರ್ಷದೊಳಗಿನ 2,428 ಜನರಿಗೆ ಸೋಂಕು ತಗುಲಿದ್ದು, 17 ಮಂದಿ ಜೂನ್ 30 ರೊಳಗೆ ಮೃತಪಟ್ಟಿದ್ದಾರೆ.
ಸೋಂಕಿತ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಇದರ ಜೊತೆಗೆ ರೋಗ ನಿರೋಧಕ ಶಕ್ತಿಯ ಕೊರತೆಯೂ ಇತ್ತು ಎಂಬ ವಿಚಾರ ಗೊತ್ತಾಗಿದೆ. ಹೀಗಾಗಿ, ಸಣ್ಣ ಮಕ್ಕಳನ್ನು ಸರಿಯಾಗಿ ಆರೈಕೆ ಮಾಡಲು ಪಾಲಿಕೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಲಾಕ್‌ಡೌನ್ ತೆರವಾದ ಬಳಿಕ ಮಕ್ಕಳಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಮಕ್ಕಳನ್ನು ಮನೆಯಿಂದ ಹೊರಗೆ ಕರೆದೊಯ್ಯಬೇಡಿ, ಅವರಿಗೆ ಪೌಷ್ಟಿಕ ಆಹಾರ ನೀಡಿ ಕಾಳಜಿ ವಹಿಸಿ ಎಂದು ಜೆಜೆ ಆಸ್ಪತ್ರೆಯ ಅಧೀಕ್ಷಕಿ ಮತ್ತು ಮಕ್ಕಳ ತಜ್ಞೆ ಡಾ.ಪಲ್ಲವಿ ಸಪಾಲೆ ಸಲಹೆ ನೀಡಿದ್ದಾರೆ.