ಭೋಪಾಲ್: ಸೌದಿ ಅರೇಬಿಯಾದಂತಹ ದೇಶಗಳಲ್ಲಿ ಮಹಿಳೆಯರ ವಿರುದ್ಧ ಅಪರಾಧ ಮಾಡುವವರನ್ನು ನಡು ರೋಡ್ನಲ್ಲಿ ಗಲ್ಲಿಗೇರಿಸಲಾಗ್ತದೆ. ಅಂತಹ ಕಾನೂನು ಭಾರತದಲ್ಲೂ ಜಾರಿಗೊಳ್ಳಬೇಕು ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿಪ್ರಾಯ ಪಟ್ಟಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನಲ್ಲಿ ಗೋಪಾಲ್ ಧಕ್ಕಡ್ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ವೇಳೆ ಅಲ್ಲಿನ ಪ್ರವಾಸೋದ್ಯಮ ಸಚಿವೆ ಉಷಾ ಠಾಕೂರ್ ಭೇಟಿ ಮಾಡಿದರು. ಈ ವೇಳೆ ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಸೌದಿ ಅರೇಬಿಯಾದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಭಾಗಿಯಾಗುವವರನ್ನು ಗಲ್ಲಿಗೇರಿಸಲಾಗುತ್ತದೆ. ಭಾರತದಲ್ಲೂ ಅಂತಹ ಕಾನೂನು ಜಾರಿಗೊಳ್ಳಬೇಕು ಎಂದರು.
ನ್ಯಾಯಾಂಗ ವ್ಯವಸ್ಥೆ ನಿಧಾನಗತಿ ಮತ್ತು ಅತ್ಯಾಚಾರಕ್ಕೊಳಗಾದವರಲ್ಲಿ ಹೆಚ್ಚಿನವರು ಪೊಲೀಸ್ ದೂರು ದಾಖಲಿಸುವುದಿಲ್ಲ. ಹೀಗಾಗಿ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಆದರೆ ಸೌದಿ ಅರೇಬಿಯಾದಲ್ಲಿ ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಭಾರತದಲ್ಲೂ ಈ ಕಾನೂನು ಜಾರಿಯಾಗಬೇಕು ಎಂದರು.
ಸಣ್ಣ ಕಾರಣಗಳಿಗಾಗಿ ಪ್ರತೀಕಾರ ತೀರಿಸಿಕೊಳ್ಳಲು ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಪ್ರೀತಿ ನಿರಾಕರಣೆ ಮಾಡುವ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತವೆ ಎಂದಿದ್ದಾರೆ.