ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಲಸಿಕೆ ಪ್ರಯೋಗಗಳನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಇಂದಿನಿಂದ ಸ್ಥಗಿತಗೊಳಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸಂಸ್ಥೆಯು, "ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ಅಸ್ಟ್ರಾಜೆನೆಕಾ ಸಂಸ್ಥೆಯು ಪ್ರಯೋಗಗಳನ್ನು ಪುನರಾರಂಭಿಸುವವರೆಗೆ ಭಾರತದಲ್ಲಿ ಪ್ರಯೋಗಗಳನ್ನು ನಿಲ್ಲಿಸಿದ್ದೇವೆ. ನಾವು ಡಿಜಿಸಿಐ (ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ) ಸೂಚನೆಗಳನ್ನು ಅನುಸರಿಸುತ್ತಿದ್ದು, ಪ್ರಯೋಗಗಳ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ" ಎಂದು ಹೇಳಿದೆ.
ಕೋವಿಡ್ ವಿರುದ್ಧ ಅಭಿವೃದ್ಧಿಪಡಿಸಿದ ಆಕ್ಸ್ಫರ್ಡ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಆಸ್ಟ್ರಾಜೆನಿಕಾ ಸಂಸ್ಥೆ ಬೇರೆ ದೇಶಗಳಲ್ಲಿ ಸ್ಥಗಿತಗೊಳಿಸಿದ ಬಗ್ಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಮತ್ತು ಗಂಭೀರ ಅಡ್ಡ ಪರಿಣಾಮ ಉಂಟಾದ ವರದಿಯನ್ನು ಕೇಂದ್ರ ಔಷಧ ನಿಯಂತ್ರಣ ಮಂಡಳಿಗೆ ತಿಳಿಸದ ಕಾರಣಕ್ಕಾಗಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಿದೆ.
ಇನ್ನು ಈ ಕುರಿತು ಪ್ರಶ್ನಿಸಿದ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಡಾ. ವಿ.ಜಿ ಸೋಮಾನಿ, "ರೋಗಿಯ ಸುರಕ್ಷತೆ ಬಗ್ಗೆ ಖಾತರಿ ಬರೋವರೆಗೆ ದೇಶದಲ್ಲಿ ಲಸಿಕೆಯ 2 ಮತ್ತು 3ನೇ ಹಂತದ ಪ್ರಯೋಗಕ್ಕೆ ನೀಡಲಾಗಿದ್ದ ಅನುಮತಿಯನ್ನು ಏಕೆ ಅಮಾನತು ಮಾಡಲಿಲ್ಲ" ಎಂದು ಕೇಳಿದ್ದಾರೆ. ಅಷ್ಟೇ ಅಲ್ಲದೆ, ನೋಟಿಸ್ ನೀಡಿದ ಬಳಿಕ ಸರಿಯಾದ ಕಾರಣ ಮತ್ತು ವಿವರಣೆ ನೀಡದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆಕ್ಸ್‌ಫರ್ಡ್‌ನಲ್ಲಿ ಲಸಿಕೆ ಪ್ರಯೋಗ ಮಾಡಿದ ನಂತರ ಕೆಲವು ಸ್ವಯಂ ಸೇವಕರು ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ನಂತರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಈ ಹೇಳಿಕೆಯನ್ನು ನೀಡಿದೆ.