ನವದೆಹಲಿ: ಜಮ್ಮು ಕಾಶ್ಮೀರದಲ್ಲಿ 4ಜಿ ಇಂಟರ್ನೆಟ್ ಸೇವೆಗಳನ್ನು ಬಳಸಲು ಅನುಮತಿ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ರಾಷ್ಟ್ರೀಯ ಭದ್ರತೆಗಾಗಿ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಪ್ಪಿಸಲು ಈ ನಿರ್ಣಯವನ್ನು ತೆಗೆದುಕೊಂಡಿರುವುದಾಗಿ ಕೋರ್ಟ್ ಸ್ಪಷ್ಟನೆ ನೀಡಿದೆ.
ಜಮ್ಮು ಕಾಶ್ಮೀರದ ಮಾಧ್ಯಮ ವೃತ್ತಿಪರರ ಸಂಘಟನೆಯ ಫೌಂಡೇಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎನ್.ರಮಣ ನೇತೃತ್ವದ ಪೀಠ ಮೇ 4ರಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು. ಈಗ 4ಜಿ ಅಂತರ್ಜಾಲ ಸೇವೆಗಳಿಗೆ ಅವಕಾಶ ನಿರಾಕರಿಸಿದೆ. ಜೊತೆಗೆ ಕೊರೊನಾ ಮಹಾಮಾರಿಯನ್ನು ಕೂಡಾ ಉಲ್ಲೇಖಿಸಿದೆ.
ವಕೀಲರಾದ ಹುಫೆಜಾ ಅಹ್ಮೆದಿ, ಸಲ್ಮಾನ್ ಖುರ್ಷಿದ್ ಈ ಅರ್ಜಿ ಸಲ್ಲಿಸಿದ್ದರು. 4ಜಿ ಅಂತರ್ಜಾಲ ಸೇವೆ ಇಲ್ಲದಿರುವ ಕಾರಣದಿಂದ ವಿದ್ಯಾರ್ಥಿಗಳಿಗೆ ಹಾಗೂ ವೈದ್ಯರಿಗೆ ತೊಂದರೆಯಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.
ವೈದ್ಯರಿಗೆ ಅಂತರ್ಜಾಲ ಸೇವೆಗಳನ್ನು ಬಳಸಲು ಸಾಧ್ಯವಾಗದೇ ಇರುವ ಕಾರಣದಿಂದ ಕೊರೊನಾ ವೈರಸ್ ಚಿಕಿತ್ಸೆಗೆ ಮಾಹಿತಿ ಪಡೆಯಲು ಕಷ್ಟವಾಗುತ್ತಿದೆ ಎಂದು ಅಹ್ಮೆದಿ ದನಿಯೆತ್ತಿದ್ದರು. ಇದಕ್ಕೆ 75 ವೈದ್ಯರೂ ಬೆಂಬಲ ಸೂಚಿಸಿದ್ದರು.