ನವದೆಹಲಿ : ದೆಹಲಿ ಗಡಿಯಲ್ಲಿ ಪ್ರತಿಭಟನಾನಿರತ ರೈತ ಸಂಘಟನೆಗಳೊಂದಿಗಿನ ಸರ್ಕಾರದ ಮಾತುಕತೆ ವಿಫಲವಾದ ಬೆನ್ನೆಲೇ ಸುಪ್ರೀಂಕೋರ್ಟ್ ಸೋಮವಾರ ಹೊಸ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಲಿದೆ.
ಜನವರಿ 7ರಂದು ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ 8ನೇ ಸುತ್ತಿನ ಮಾತುಕತೆ ವಿಫಲವಾಯಿತು. ಕಾರಣ ವಿವಾದಾತ್ಮಕ ಕಾನೂನುಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರವು ಒಪ್ಪಲಿಲ್ಲ. ಬಳಿಕ ರೈತ ಮುಖಂಡರು ನಾವು ಸಾಯುವವರೆಗೂ ಹೋರಾಡಲು ಸಿದ್ಧರಿದ್ದೇವೆ ಮತ್ತು ಕಾಯ್ದೆಗಳನ್ನು ವಾಪಸ್ ಪಡೆದ ನಂತರವೇ ನಾವು ಮನೆಗೆ ಹಿಂದುರುಗುತ್ತೇವೆ ಎಂದಿದ್ದರು.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಲಿದೆ. ಕೇಂದ್ರ ಮತ್ತು ರೈತ ಮುಖಂಡರು ತಮ್ಮ ಮುಂದಿನ ಸಭೆಯನ್ನು ಜನವರಿ 15ರಂದು ನಡೆಸಲು ನಿರ್ಧರಿಸಿದ್ದಾರೆ.
ಓದಿ:ಮಾಜಿ ಸಿಎಂ ಫಡ್ನವೀಸ್, ರಾಜ್ ಠಾಕ್ರೆ ಭದ್ರತೆ ಕಡಿತಗೊಳಿಸಿದ 'ಮಹಾ' ಸರ್ಕಾರ
ಸುಪ್ರೀಂಕೋರ್ಟ್ ಈ ಹಿಂದೆ ಕೇಂದ್ರಕ್ಕೆ ನೋಟಿಸ್ ನೀಡಿತ್ತು. ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧದ ಒಂದು ಗುಂಪಿನ ಮನವಿಗೆ ಕೇಂದ್ರದ ಪ್ರತಿಕ್ರಿಯೆ ಏನು ಎಂಬುದನ್ನು ಕೇಳಿತ್ತು. ರೈತರ ಪ್ರತಿಭಟನೆಯ ವಿಷಯವಾಗಿ ಮನವಿಗಳನ್ನು ಆಲಿಸುವಾಗ, ಉನ್ನತ ನ್ಯಾಯಾಲಯವು ಡಿಸೆಂಬರ್ 17ರಂದು ಪ್ರತಿಭಟನೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಲು ಅವಕಾಶ ನೀಡಬೇಕು.
ಪ್ರತಿಭಟಿಸುವುದು ಎಲ್ಲರ ಮೂಲಭೂತವಾದ ಹಕ್ಕಾಗಿದೆ. ಹಾಗಾಗಿ, ನ್ಯಾಯಾಲಯ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದಿತ್ತು. ಕಳೆದ ವರ್ಷ ನವೆಂಬರ್ ಅಂತ್ಯದಿಂದ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ಸಾವಿರಾರು ರೈತರು ದೆಹಲಿಯ ವಿವಿಧ ಗಡಿಭಾಗಗಳಲ್ಲಿ ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.