ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಜೈಲುಪಾಲಾಗಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಸಲ್ಲಿಸಿರುವ ಜಾಮೀನು ಅರ್ಜಿ ಇಂದು ಸುಪ್ರೀಂನಲ್ಲಿ ವಿಚಾರಣೆಗೆ ಬರಲಿದೆ.
ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಚಿದಂಬರಂ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಜಸ್ಟೀಸ್ ಆರ್.ಭಾನುಮತಿ ಹಾಗೂ ಎ.ಎಸ್. ಬೋಪಣ್ಣ ನೇತೃತ್ವದ ಪೀಠ ಈ ಅರ್ಜಿಯನ್ನು ಇಂದು ಕೈಗೆತ್ತಿಕೊಳ್ಳಲಿದೆ.
ಚಿದಂಬರಂ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ತನಿಖಾ ಸಂಸ್ಥೆಯಿಂದ ಪ್ರತಿಕ್ರಿಯೆಯನ್ನು ಕೇಳಿದ್ದು, ಎಲ್ಲ ಮೂರು ಪ್ರಕರಣಗಳನ್ನು ಇಂದೇ ವಿಚಾರಣೆ ನಡೆಸಲಿದೆ.
ಪಿ.ಚಿದಂಬರಂ ನ್ಯಾಯಾಂಗ ಬಂಧನ ಇಂದಿಗೆ ಕೊನೆಯಾಗಲಿದ್ದು, ಸುಪ್ರೀಂಕೋರ್ಟ್ ಇಂದಿನ ವಿಚಾರಣೆಯಲ್ಲಿ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಮಾಡುತ್ತೋ ಅಥವಾ ಜಾಮೀನು ನೀಡಲಿದೆಯೋ ಎನ್ನುವುದು ಕುತೂಹಲ ಮೂಡಿಸಿದೆ.