ನವದೆಹಲಿ: ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಕೇಂದ್ರ ಸರ್ಕಾರ ಲಾಕ್ಡೌನ್ನಿಂದ ಇಡೀ ದೇಶವನ್ನೇ ಬಂದ್ ಮಾಡಿದ್ದು, ಇದರಿಂದ ಎಲ್ಲರೂ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಇದೀಗ ಮೊರೊಟೋರಿಯಂ ಅವಧಿಯ ನಂತರದ ಸಾಲ ಮರುಪಾವತಿ ಮೇಲಿನ ಬಡ್ಡಿ ದರ ಮನ್ನಾ ಮಾಡಬಹುದಲ್ಲವೇ? ಎಂದು ಪ್ರಶ್ನಿಸುವ ಮೂಲಕ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ.
ಲಾಕ್ಡೌನ್ನಿಂದ ಹಣಕಾಸಿನ ಸಮಸ್ಯೆ ಉದ್ಭವವಾಗಿದೆ. ಇದು ವ್ಯವಹಾರದ ಬಗ್ಗೆ ಮಾತನಾಡುವ ಸಮಯವಲ್ಲ. ಜನರ ದುಃಸ್ಥಿತಿಗೆ ನೀವೂ ಸ್ಪಂದಿಸಬೇಕಾಗಿದ್ದು, ಮೊರೊಟೋರಿಯಂ ಅವಧಿಯ ಸಾಲ ಮರುಪಾವತಿಯ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರ ಹಾಗೂ ಆರ್ಬಿಐಗೆ ಖಡಕ್ ಸೂಚನೆ ನೀಡಿದೆ.
ಮಾರ್ಚ್ 27ರಂದು ಆರ್ಬಿಐ ಹೊರಡಿಸಿರುವ ಅಧಿಸೂಚನೆಯ ಕೆಲವು ಭಾಗ ರದ್ದುಗೊಳಿಸಬೇಕೆಂದು ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅದರ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಈ ರೀತಿಯಾಗಿ ಹೇಳಿದೆ.
ಲಾಕ್ಡೌನ್ ಸಮಯದಲ್ಲಿ ಸಾಲ ಮರುಪಾವತಿ ಮೇಲಿನ ಬಡ್ಡಿ ದರ ಮನ್ನಾ ಮಾಡುವ ವಿಚಾರವಾಗಿ ಕೇಂದ್ರ ಸರ್ಕಾರ ತನ್ನ ನಿಲುವು ತಿಳಿಸುವಂತೆ ಬುಧವಾರದವರೆಗೆ ಕಾಲಾವಕಾಶ ನೀಡಿತ್ತು. ಈಗಾಗಲೇ ಕೇಂದ್ರ ಸರ್ಕಾರ ತನ್ನ ನಿಲುವು ತಿಳಿಸಿದ್ದು, ಇದರಿಂದ ಬ್ಯಾಂಕ್ಗಳಿಗೆ ಧಕ್ಕೆಯಾಗಲಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
ಇದರಿಂದ ಆಕ್ರೋಶಗೊಂಡ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಅಶೋಕ್ ಭೂಷಣ್, ಕೊರೊನಾದಿಂದಾಗಿ ಇಡೀ ದೇಶವನ್ನು ಲಾಕ್ಡೌನ್ ಮಾಡಿದ್ದರಿಂದ ಇಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ದೇಶದ ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಇದೀಗ ಬ್ಯಾಂಕ್ಗಳ ವ್ಯವಹಾರದ ಮೇಲೆ ಆಸಕ್ತಿ ತೋರಿಸುವ ಬದಲಿಗೆ ಜನರ ನೋವಿಗೆ ಸ್ಪಂದಿಸಿ ಎಂದು ಕೇಂದ್ರಕ್ಕೆ ತುಸು ಖಾರವಾಗಿಯೇ ಸೂಚನೆ ನೀಡಿದ್ದಾರೆ.