ನವದೆಹಲಿ: ಕೊರೊನಾ ವೈರಸ್ ಪ್ರೇರೇಪಿತ ಲಾಕ್ಡೌನ್ ವೇಳೆ ಸಾಮೂಹಿಕ ವಜಾ ಮತ್ತು ಐಟಿ/ಐಟಿಇಎಸ್/ಬಿಪಿಒ/ಕೆಪಿಐನಲ್ಲಿನ ಉದ್ಯೋಗಿಗಳ ವೇತನ ಕಡಿತವನ್ನು ಪರೀಕ್ಷಿಸುವುದಾಗಿ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಕೆ.ಕೌಲ್ ಮತ್ತು ಬಿ.ಆರ್. ಗವಾಯಿ ಅವರಿದ್ದ ನ್ಯಾಯಪೀಠ, ವಿಡಿಯೋ ಕಾನ್ಫರೆನ್ಸ್ ಮೂಲಕ ಈ ವಿಷಯ ವಿಚಾರಣೆ ಕೈಗೆತ್ತಿಕೊಂಡಿತು. ಈ ಸಮಸ್ಯೆಯನ್ನು ಪರೀಕ್ಷಿಸಲು ಒಪ್ಪಿಕೊಂಡಿದ್ದು, ಮೇ 15ಕ್ಕೆ ಪಟ್ಟಿ ಮಾಡುವುದಾಗಿ ತಿಳಿಸಿದೆ.
ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ನೌಕರರ ಸೇನಾ (ನೈಟ್ಸ್) ಆನ್-ರೆಕಾರ್ಡ್ ಅಮಿತ್ ಪೈ ಮೂಲಕ ಸಲ್ಲಿಸಿದೆ. ಮಾರ್ಚ್ 29ರಂದು ಕೇಂದ್ರ ಹೊರಡಿಸಿದ ನಿರ್ದೇಶನ ಮತ್ತು ಇತರ ಹಲವು ರಾಜ್ಯಗಳು ನೀಡಿದ ಸಲಹೆಗಳನ್ನು ಜಾರಿಗೆ ತರಲು ಕೋರಿದೆ. ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡನೆ ಮಾಡಿದ್ದಾರೆ.
ನೌಕರರ ವಜಾ ಅಥವಾ ಲಾಕ್ಡೌನ್ ಸಮಯದಲ್ಲಿ ವೇತನ ಕಡಿತ ಜಾರಿಗೊಳಿಸದಂತೆ ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳಿಗೆ ಸಲಹೆ ನೀಡುವಂತೆ ಕೇಂದ್ರ ಕಾರ್ಮಿಕ ಮತ್ತು ಸಬಲೀಕರಣ ಸಚಿವಾಲಯ, ರಾಜ್ಯ ಸರ್ಕಾರಗಳ ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿತ್ತು.
ಏಪ್ರಿಲ್ 19ರಂದು ಪ್ರಕಟವಾದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ವರದಿಯಲ್ಲಿ, ದೇಶಾದ್ಯಂತ ಹಲವು ಕಂಪನಿಗಳು ಯಾವುದೇ ಕಾರಣವಿಲ್ಲದೆ ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಲು ಆರಂಭಿಸಿವೆ. ಅವರ ಸಂಬಳ ತಡೆಹಿಡಿಯುತ್ತಿವೆ ಎಂದು ಉಲ್ಲೇಖಿಸಿತ್ತು.