ನವದೆಹಲಿ: ಹಿಂದಿನ ಮುಖ್ಯ ನ್ಯಾಯಮೂರ್ತಿಗಳು (ಸಿಜೆಐ) ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ಆಗಸ್ಟ್ 4 ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು 2009 ರ ತಿರಸ್ಕಾರ ಅರ್ಜಿಯ ವಿಚಾರಣೆಯನ್ನ ಮುಂದೂಡಿದೆ. ಪ್ರಶಾಂತ್ ಭೂಷಣ್ ಪರ ಹಾಜರಾದ ಹಿರಿಯ ವಕೀಲ ಡಾ.ರಾಜೀವ್ ಧವನ್, ಈ ಪ್ರಕರಣವು 2009 ರ ವರ್ಷದ್ದಾಗಿದೆ ಮತ್ತು ಈ ವಿಷಯದಲ್ಲಿ ಕೊನೆಯ ವಿಚಾರಣೆಯನ್ನು 2013 ರಲ್ಲಿ ನಡೆಸಲಾಗಿದೆ ಎಂಬುದನ್ನ ಕೋರ್ಟ್ ಗಮನಕ್ಕೆ ತಂದರು
"ಈ ಮೊದಲು ಪ್ರಶಾಂತ್ ಭೂಷಣ್ ಪರ ಹಿರಿಯ ವಕೀಲ ರಾಮ್ ಜೇಠ್ಮಲಾನಿ ವಾದ ಮಾಡ್ತಿದ್ದರು. ಅವರ ನಿಧನದ ನಂತರ ನಾನು ಪ್ರಶಾಂತ್ ಭೂಷಣ್ ಪರ ವಾದ ಮಂಡನೆ ಮಾಡಲಿದ್ದೇನೆ ಎಂದು ಧವನ್ ಹೇಳಿದ್ದಾರೆ.
ನಾನು ಪ್ರಕರಣಕ್ಕೆ ಸಂಬಂಧಿಸಿದಂತೆ ತಿಳಿದುಕೊಳ್ಳಬೇಕಿದೆ. ನಮಗೆ ಈ ಸಂಬಂಧದ ದಾಖಲೆಗಳ ಅವಶ್ಯಕತೆ ಇದೆ. ತಪ್ಪು ಮಾಡಿಲ್ಲ ಎಂದು ಸಾಬೀತು ಮಾಡಬೇಕಾಗಿದೆ. ಇದಕ್ಕಾಗಿ ನಮಗೆ ಸಮಯಾವಕಾಶದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು. ಧವನ್ ಮನವಿ ಆಲಿಸಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನ ಆಗಸ್ಟ್ 4ಕ್ಕೆ ಮುಂದೂಡಿದೆ.