ನವ ದೆಹಲಿ: ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ದೆಹಲಿಯಲ್ಲಿ ಪ್ರಾರಂಭವಾಗಿದೆ. ಕೊರೊನಾ ಸೋಂಕಿನಿಂದ ಮುಕ್ತರಾದವರು ಇತರರ ಜೀವ ಉಳಿಸಲು ಪ್ಲಾಸ್ಮಾ ದಾನ ಮಾಡಬೇಕು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈಗಾಗಲೇ ಮನವಿ ಮಾಡಿದ್ದಾರೆ.
ಹೆಚ್ಚಿನ ಜನರು ಪ್ಲಾಸ್ಮಾ ದಾನ ಮಾಡಲು ಮುಂದೆ ಬರಬೇಕು ಎಂಬ ಉದ್ದೇಶದಿಂದ ಇದೀಗ ದೆಹಲಿ ಸರ್ಕಾರದ ಸಚಿವರು ಮತ್ತು ಶಾಸಕರು ಪ್ಲಾಸ್ಮಾ ದಾನಕ್ಕೆ ನಿರ್ಧರಿಸಿದ್ದಾರೆ.
ಕೊರೊನಾದಿಂದ ಗುಣಮುಖರಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಆಮ್ ಆದ್ಮಿ ಪಕ್ಷದ ಶಾಸಕ ಅತಿಶಿ ಮತ್ತು ಇತರ ಎಎಪಿ ನಾಯಕರು ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದಾರೆ.
ಆದರೆ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದ 14 ದಿನಗಳ ಬಳಿಕ ಅವರು ಪ್ಲಾಸ್ಮಾ ದಾನ ಮಾಡಬಹುದಾಗಿದೆ.
ಪ್ಲಾಸ್ಮಾ ಬ್ಯಾಂಕ್ ಪ್ರಾರಂಭಿಸಿರುವುದು ಉತ್ತಮ ನಿರ್ಧಾರ:
ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ಪ್ರಾರಂಭಿಸಿರುವುದು ಉತ್ತಮ ಹೆಜ್ಜೆ ಎಂದು ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಬಣ್ಣಿಸಿದ್ದಾರೆ. ಪ್ಲಾಸ್ಮಾ ಚಿಕಿತ್ಸೆ ಮೂಲಕ ಕೊರೊನಾ ವೈರಸ್‌ನಿಂದ ಜೀವವನ್ನು ಉಳಿಸಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ವೈದ್ಯಕೀಯ ಪ್ರೋಟೋಕಾಲ್ ಪ್ರಕಾರ ಪ್ಲಾಸ್ಮಾ ದಾನ ಮಾಡಲು ಅನುಮತಿ ಸಿಕ್ಕ ಬಳಿಕ ತಮ್ಮ ಪ್ಲಾಸ್ಮಾ ದಾನ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಎಎಪಿ ಶಾಸಕ ಅತೀಶಿ ಕೂಡಾ ಪ್ಲಾಸ್ಮಾ ದಾನ ಮಾಡಲು ನಿರ್ಧರಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. "ನಾನು ಈಗ ಕೊರನಾದಿಂದ ಚೇತರಿಸಿಕೊಂಡಿದ್ದು, ಪ್ಲಾಸ್ಮಾ ದಾನ ಮಾಡಬಹುದು." ಎಂದಿದ್ದಾರೆ.
ಅದೇ ರೀತಿ ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾದ ದೆಹಲಿ ಸರ್ಕಾರದ ಸಲಹಾ ತಂಡದ ಇತರೆ ಎಎಪಿ ನಾಯಕರು ಕೂಡಾ ಪ್ಲಾಸ್ಮಾ ದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.