ನವದೆಹಲಿ: ಕೊರೊನಾದ ಗ್ರಾಫ್ ನಿರಂತರವಾಗಿ ಮೇಲಕ್ಕೆ ಏರುತ್ತಲೇ ಇದೆ. ಇವೆಲ್ಲದರ ನಡುವೆ ದೇಶಾದ್ಯಂತ ಕೊರೊನಾದ ಬಗ್ಗೆ ಭಯದ ವಾತಾವರಣ ನಿರ್ಮಾಣವಾಗಿದ್ದು, ಫಾರ್ಮಾ ಕಂಪನಿಗಳು ವಿಟಮಿನ್ ಮಾತ್ರೆಗಳ ಉತ್ಪಾದನೆ ಹೆಚ್ಚಿಸಿವೆ.
ಈ ಮಾತ್ರೆಗಳ ಮಾರಾಟದಿಂದ ಫಾರ್ಮ ಕಂಪನಿಗಳು ಲಾಭ ಪಡೆಯುತ್ತಿವೆ ಎಂದು ತಜ್ಞರು ಹೇಳುತ್ತಾರೆ. ರೋಗಿಯ ರೋಗನಿರೋಧಕ ಶಕ್ತಿ ಹೆಚ್ಚಾಗಬಹುದು ಅಥವಾ ಇಲ್ಲದಿರಬಹುದು; ಆದರೆ, ಜನರ ಭಯದಿಂದಾಗಿ, ಫಾರ್ಮಾ ಕಂಪನಿಗಳ ಲಾಭವಂತೂ ಹೆಚ್ಚುತ್ತಿದೆ.
ಕೊರೊನಾ ಪರಿಣಾಮದಿಂದಾಗಿ ಆರ್ಥಿಕತೆ ಕುಗ್ಗುತ್ತಿದ್ದರೂ, ಈ ನೀರಸ ವಾತಾವರಣದಲ್ಲಿಯೂ ಕೆಲ ಕ್ಷೇತ್ರಗಳು ಉತ್ತಮವಾಗಿ ಬೆಳೆಯುತ್ತಿವೆ. ಫಾರ್ಮಾ ಉದ್ಯಮವೂ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ. ಕೊರೊನಾ ಸೋಂಕಿಗೆ ಯಾವುದೇ ಔಷಧ ಅಥವಾ ಲಸಿಕೆ ಲಭ್ಯವಿಲ್ಲದ ಕಾರಣ, ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ವಿಟಮಿನ್ ಔಷಧಗಳ ಮೊರೆ ಹೋಗುತ್ತಿದ್ದಾರೆ.
ಕೊರೊನಾ ಅವಧಿಯಲ್ಲಿ ವಿಟಮಿನ್ ಸಿ, ವಿಟಮಿನ್ ಡಿ ಮತ್ತು ಝಿಂಕ್ ಅಂಶಗಳುಳ್ಳ ಔಷಧ ಸೇವಿಸುತ್ತಿದ್ದಾರೆ. ಕೊರೊನಾ ಭಯದಿಂದ ವೈದ್ಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿ ತಮಗೆ ಸೋಂಕು ತಗುಲದಿರಲಿ ಎಂದು, ತಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ವಿಟಮಿನ್‌ಗಳ ಔಷಧಗಳನ್ನು ಸ್ವತಃ ತೆಗೆದುಕೊಳ್ಳಲು ಪ್ರಾರಂಭಿಸಿದರು.
ಹೀಗಾಗಿ ಜನಸಾಮಾನ್ಯರು ಕೂಡಾ ಈ ಔಷಧಗಳನ್ನು ಸೇವಿಸುತ್ತಿದ್ದು, ವಿಟಮಿನ್ ಸಿ, ವಿಟಮಿನ್ ಡಿ ಮತ್ತು ಝಿಂಕ್ ಔಷಧದ ಮಾರಾಟದಲ್ಲಿ ಭಾರಿ ಏರಿಕೆ ಕಂಡುಬಂದಿದೆ ಎಂದು ರಸಾಯನಶಾಸ್ತ್ರಜ್ಞರು ಹೇಳುತ್ತಾರೆ.
ಈ ಹಿಂದೆ ಜನರು ತಮ್ಮ ದೇಹಕ್ಕೆ ವಿಟಮಿನ್ಗಳನ್ನು ಹಣ್ಣುಗಳ ಮೂಲಕ ಪೂರೈಸುತ್ತಿದ್ದರು, ಆದರೆ, ಈಗ ವಿಟಮಿನ್ಗಳು ಔಷಧಗಳಾಗಿ ಲಭ್ಯವಿರುವ ಅವುಗಳ ಮೇಲೆ ಅವಲಂಬಿತರಾಗಿದ್ದಾರೆ.
ಆದರೆ ಇವುಗಳನ್ನು ಅತಿಯಾಗಿ ಸೇವಿಸಬಾರದು. ವೈದ್ಯರ ಸಲಹೆ ಪಡೆದು, ಅವರು ಹೇಳಿದ ಪ್ರಮಾಣದಲ್ಲಿಯೇ ಸೇವಿಸಬೇಕು. ವೈದ್ಯರನ್ನು ಸಂಪರ್ಕಿಸದೇ ಜನರು ಈ ಔಷಧಗಳನ್ನು ಮನಸೋ ಇಚ್ಛೆ ಬಳಸಬಾರದು. ಇವುಗಳ ಅತಿಯಾದ ಸೇವನೆಯು ಯಾವುದೇ ಸಹಾಯ ಮಾಡುವುದಿಲ್ಲ, ಬದಲಾಗಿ ಇದು ಬೇರೆ ರೋಗಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.