ತಿರುವನಂತಪುರಂ: ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲವು ಶುಕ್ರವಾರ(ಇಂದು) ಸಂಜೆ 5 ಗಂಟೆಗೆ ತುಲಾಮಾಸ ಪೂಜೆಗೆ ತೆರೆಯಲಿದ್ದು, ಶನಿವಾರದಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಭಕ್ತರು ದೇವಾಲಯಕ್ಕೆ ಪ್ರವೇಶ ಪಡೆಯಲು ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯ ಮಾಡಲಾಗಿದೆ. ಭಕ್ತರು ಪಂಬಾ ಅಥವಾ ಪಂಪಾನದಿಯ ಬಳಿ ಪ್ರವೇಶ ಪಡೆಯುವ 48 ಗಂಟೆಗಳ ಒಳಗೆ ಕೋವಿಡ್ ಸೋಂಕು ಪರೀಕ್ಷೆ ಮಾಡಿಸಿಕೊಂಡಿರಬೇಕೆಂದು ದೇವಾಲಯದ ಆಡಳಿತ ಮಂಡಳಿ ಸೂಚನೆ ನೀಡಿದೆ.
ಭಕ್ತರ ಕೋವಿಡ್ ಟೆಸ್ಟ್ಗೆ ಅನುಕೂಲವಾಗುವಂತೆ ನೀಲಕ್ಕಲ್ ಬಳಿ ಆ್ಯಂಟಿಜೆನ್ ಕೋವಿಡ್ ಟೆಸ್ಟ್ ಕೇಂದ್ರ ತೆರೆಯಲಾಗಿದೆ. ಒಂದು ದಿನಕ್ಕೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಇರುವ ಕೇವಲ 200 ಮಂದಿ ಭಕ್ತರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಲಾಗುತ್ತದೆ.
ಇದರ ಜೊತೆಗೆ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.