ಭುವನೇಶ್ವರ್: ಒಡಿಶಾದ ಜೇ ಕಿಶೋರ್ ಪ್ರಧಾನ್ ಎಂಬ 64 ವರ್ಷದ ನಿವೃತ್ತ ಬ್ಯಾಂಕ್ ನೌಕರ ಲಕ್ಷಾಂತರ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳಂತೆ ನೀಟ್ ಪರೀಕ್ಷೆಗೆ ಕುಳಿತು, ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಈಗ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದಾರೆ.
ಭಾರತದ ವೈದ್ಯಕೀಯ ಶಿಕ್ಷಣ ಇತಿಹಾಸದಲ್ಲಿ ಅಪರೂಪದ ಘಟನೆ ಎಂದು ವಿವರಿಸಲಾಗುತ್ತಿರುವ ಪ್ರಧಾನ್, ತಾವು ಬದುಕಿರುವ ಕೊನೆಯ ಗಳಿಗೆವರೆಗೂ ಜನರಿಗೆ ಸೇವೆ ಸಲ್ಲಿಸಲು ಬಯಸಿದ್ದಾರೆ.
ಎಸ್‌ಬಿಐನ ಮಾಜಿ ಅಧಿಕಾರಿಯಾಗಿದ್ದ ಪ್ರಧಾನ್ ಅವರು ಅಂಗವಿಕಲ ಮೀಸಲಾತಿ ಕೋಟಾದಡಿ ಸರ್ಕಾರಿ ವೀರ್ ಸುರೇಂದ್ರ ಸಾಯಿ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದಾರೆ.
ಇದು ದೇಶದ ವೈದ್ಯಕೀಯ ಶಿಕ್ಷಣದ ಇತಿಹಾಸದಲ್ಲಿ ನಡೆದ ಅಪರೂಪದ ಘಟನೆಗಳಲ್ಲಿ ಒಂದಾಗಿದೆ. ಇಂತಹ ಇಳಿ ವಯಸ್ಸಿನಲ್ಲೂ ವೈದ್ಯಕೀಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆಯುವ ಮೂಲಕ ಪ್ರಧಾನ್, ಬಹುದೊಡ್ಡ ಉದಾಹರಣೆಯಾಗಿ ನಮ್ಮ ಮುಂದೆ ನಿಂತಿದ್ದಾರೆ ಎಂದು ವಿಮ್ಸಾರ್ ನಿರ್ದೇಶಕ ಲಲಿತ್ ಮೆಹರ್ ಹೇಳಿದ್ದಾರೆ.
ಇದನ್ನೂ ಓದಿ: ವಿಜಯವಾಡದಲ್ಲಿ ದೇಗುಲದ ಎತ್ತರ ಹೆಚ್ಚಳ, ಅದು ಹೇಗೆ ಗೊತ್ತೇ?
ಸೆಪ್ಟೆಂಬರ್‌ನಲ್ಲಿ ಅತ್ಯಧಿಕ ವಯೋಮಿತಿ ಹೊಂದಿರದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್) ಪ್ರಧಾನ್ ಹಾಜರಾದರು. ಉತ್ತಮ ಶ್ರೇಯಾಂಕ ಗಳಿಸಿ ವಿಮ್ಸಾರ್‌ಗೆ ಅರ್ಹತೆ ಪಡೆದರು. ಅವರ ಅವಳಿ ಹೆಣ್ಣುಮಕ್ಕಳ ಇತ್ತೀಚಿನ ಸಾವು ಅವರನ್ನು ನೀಟ್‌ಗೆ ಕುಳಿತುಕೊಳ್ಳಲು ಪ್ರೇರೇಪಿಸಿ ಎಂಬಿಬಿಎಸ್ ಕೋರ್ಸ್‌ಗೆ ಸೇರಿ ವೈದ್ಯರಾಗುವಂತೆ ಮಾಡಿದೆ ಎಂದು ಬರ್ಗಢ್ ನಿವಾಸಿ ಹೇಳಿದರು.
ಎಂಬಿಬಿಎಸ್ ಕೋರ್ಸ್ ಮುಗಿಯುವ ಹೊತ್ತಿಗೆ 70 ವರ್ಷ ತುಂಬುವ ಸಾಧ್ಯತೆ ಇರುವ ಪ್ರಧಾನ್, 'ವಯಸ್ಸು ಕೂಡ ನನಗೆ ಕೇವಲ ಒಂದು ಸಂಖ್ಯೆ. ನನಗೆ ಮುಂದೆ ಯಾವುದೇ ವಾಣಿಜ್ಯ ಉದ್ದೇಶಗಳಿಲ್ಲ. ನಾನು ಬದುಕುವವರೆಗೂ ಜನರ ಸೇವೆ ಮಾಡಲು ಬಯಸುತ್ತೇನೆ' ಎಂದರು.