ನವದೆಹಲಿ: ಪೊಲೀಸರನ್ನು ಗೌರವಿಸಿ, ಅರು ನಮ್ಮ ಸ್ನೇಹಿತರೇ ಹೊರತು ಶತ್ರುಗಳಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದರು.
ದೆಹಲಿ ಪೊಲೀಸರ 73 ನೇ ರೈಸಿಂಗ್ ದಿನಾಚರಣೆಯಲ್ಲಿ ಮಾತನಾಡಿದ ಶಾ, ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸಲಹೆಯನ್ನು ನೆನಪಿಸಿಕೊಳ್ಳುವ ಮೂಲಕ ಹಿಂಸಾತ್ಮಕ ಸಂದರ್ಭಗಳನ್ನು ಶಾಂತವಾಗಿ ನಿಭಾಯಿಸುವ ಪೊಲೀಸರನ್ನು ಗೌರವಿಸೋಣ ಎಂದರು.
ಯಾವುದೇ ಧರ್ಮ ಜಾತಿಯ ಬೇಧಭಾವವಿಲ್ಲದೆ, ದೇಶದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವ ಅಗತ್ಯವಿದೆ ಎಂದು ತಿಳಿಸಿದರು. ಅಲ್ಲದೇ ಸ್ವಾತಂತ್ರ್ಯದ ನಂತರ 35,000 ಕ್ಕೂ ಹೆಚ್ಚು ಪೊಲೀಸರು ದೇಶವನ್ನು ರಕ್ಷಿಸುವಲ್ಲಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ ಎಂಬ ಅಂಶವನ್ನು ನಾವು ಕಡೆಗಣಿಸಬಾರದೆಂದು ತಿಳಿಸಿದರು.
ದೇಶವೇ ಹಬ್ಬದ ಸಂಭ್ರಮಾಚರಣೆಯಲ್ಲಿದ್ದರೂ ಸಹ ಪೊಲೀಸರು ಯಾವುದೇ ರಜೆ ತೆಗೆದುಕೊಳ್ಳದೆ ದೇಶಸೇವೆಗೆ ಮುಂದಾಗುತ್ತಾರೆಂದು ಅವರನ್ನು ಪ್ರಶಂಸಿಸಿದರು. ಅಲ್ಲದೇ ಇತ್ತೀಚೆಗೆ ಸಿಎಎ ಕುರಿತಾದ ಪ್ರತಿಭಟನೆಗಳನ್ನು ನಿಯಂತ್ರಿಸಿದ ದೆಹಲಿ ಪೊಲೀಸರ ಕಾರ್ಯವೈಖರಿಯನ್ನೂ ಶ್ಲಾಘಿಸಿದರು.
ಸರ್ದಾರ್ ಪಟೇಲ್ ಸ್ಥಾಪಿಸಿದ ದೆಹಲಿ ಪೊಲೀಸ್ ತಂಡ, ಯಾವುದೇ ಘಟನೆಗಳಲ್ಲಿ ಶಾಂತಯುತವಾಗಿ ರಕ್ಷಣೆಗೆ ಮುಂದಾಗಬೇಕೆಂಬ ಪಟೇಲ್ ನಿರೀಕ್ಷೆಯನ್ನು ದೆಹಲಿ ಪೊಲೀಸರು ತಲುಪಿದ್ದಾರೆ. ಈವರೆಗೆ ರಾಜಧಾನಿಯಲ್ಲಿ ಬೃಹತ್ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗಿದೆ. ದೆಹಲಿ ಪೊಲೀಸ್ ಪಡೆ ವಿಶ್ವದ ಅತ್ಯುತ್ತಮ ಪೊಲೀಸ್ ಪಡೆಗಳಲ್ಲಿ ಒಂದಾಗಿದೆಯೆಂದು ಶಾ ಶ್ಲಾಘಿಸಿದರು.