ಬಹರಾಯಿಚ್ (ಉತ್ತರ ಪ್ರದೇಶ): ನೇಪಾಳದ ಮೂರು ಅಣೆಕಟ್ಟೆಗಳಿಂದ ನದಿಗಳಿಗೆ ಹೆಚ್ಚುವರಿಯಾಗಿ ನೀರು ಬಿಡುಗಡೆ ಮಾಡಿದ ಹಿನ್ನೆಲೆ, ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯ 60ಕ್ಕೂ ಅಧಿಕ ಹಳ್ಳಿಗಳು ಪ್ರವಾಹದಿಂದ ಮುಳುಗಡೆಯಾಗಿವೆ.
ಪ್ರವಾಹದಿಂದಾಗಿ ಒಂದುವರೆ ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರಾಗಿ ಬೀದಿಗೆ ಬಂದಿದ್ದು, 171ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜೈಚಂದ್ರ ಪಾಂಡೆ ತಿಳಿಸಿದ್ದಾರೆ. ಹಾಗೂ ಜನರ ರಕ್ಷಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಅವರು ಹೇಳಿದರು.
ಪ್ರವಾಹದಿಂದ ಕನಿಷ್ಠ 61 ಹಳ್ಳಿಗಳು ಮುಳುಗಡೆಯಾಗಿದ್ದು, ಕೈಸರ್‌ಗಂಜ್, ಮಹ್ಸಿ ಮತ್ತು ಮಹಿಪೂರ್ವ ತಾಲೂಕಿನ ಹಳ್ಳಿಗಳ 1.50 ಲಕ್ಷಕ್ಕೂ ಅಧಿಕ ಜನರು ಬೀದಿಗೆ ಬಂದಂತಾಗಿದೆ. ಜಿಲ್ಲಾಡಳಿತವು ಸಂತ್ರಸ್ತರಿಗೆ ನೆರವು ನೀಡುತ್ತಿದ್ದು, ರಕ್ಷಣಾ ಚಟುವಟಿಕೆಗಾಗಿ ಒಂದು ಮೋಟಾರ್ ಬೋಟ್, 179 ದೋಣಿ ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿ, 48 ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿದೆ.