ನವದೆಹಲಿ : ದೇಶದಲ್ಲಿ ಕೋವಿಡ್ ರೋಗಿಗಳ ಚೇತರಿಕೆಯ ಪ್ರಮಾಣ ಶೇ. 60 ರ ಸಮೀಪದಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಮೂಹಿಕ ಮತ್ತು ಕೇಂದ್ರೀಕೃತ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಪ್ರಸ್ತುತ ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳಿಗಿಂತ ಚೇತರಿಸಿಕೊಂಡವರ ಸಂಖ್ಯೆ 1,19,696 ಹೆಚ್ಚಿದೆ. ಸಕ್ರೀಯ ಪ್ರಕರಣಗಳ ಸಂಖ್ಯೆ 2,15,125 ಇದ್ದರೆ, ಗುಣಮುಖರಾದವರ ಸಂಖ್ಯೆ 3,34,821 ಇದೆ. ಮಂಗಳವಾರ 24 ಗಂಟೆಯ ಅವಧಿಯಲ್ಲಿ 13,099 ಜನರು ಸೋಂಕು ಮುಕ್ತರಾಗಿದ್ದಾರೆ. ಈ ಮೂಲಕ ಒಟ್ಟು ಚೇತರಿಕೆಯ ಪ್ರಮಾಣ ಶೇ. 59.07 ಇದೆ ಎಂದು ಸಚಿವಾಲಯ ತಿಳಿಸಿದೆ.
ಇನ್ನು, ದೇಶದಲ್ಲಿ ಡಯಾಗ್ನೋಸ್ಟಿಕ್ ಲ್ಯಾಬ್ಗಳ ಸಂಖ್ಯೆ ಹೆಚ್ಚಿಸಲಾಗಿದ್ದು, 1049 ಲ್ಯಾಬ್ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ಈ ಪೈಕಿ 761 ಸರ್ಕಾರಿ ಮತ್ತು 288 ಖಾಸಗಿ ಲ್ಯಾಬ್ಗಳಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಐಸಿಎಂಆರ್ ಪ್ರಕಾರ, ಜೂನ್ 29 ರವರೆಗೆ ಒಟ್ಟು 86,08,654 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಸೋಮವಾರ ಒಂದೇ ದಿನ 2,10,292 ಮಾದರಿಗಳನ್ನು ಪರೀಕ್ಷಿಸಲಾಗಿದೆ.