ಪ್ರಧಾನಿ ನರೇಂದ್ರ ಮೋದಿ 2019ನೇ ಸಾಲಿನ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲೂ ಪಾಲ್ಗೊಳ್ಳುತ್ತಿದ್ದು, ಮೂರು ವರ್ಷಗಳ ಬಳಿಕ ನ್ಯೂಯಾರ್ಕ್ಗೆ ಭೇಟಿ ನೀಡುತ್ತಿದ್ದಾರೆ. ಜಗತ್ತು ಈಗ 74ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ದಿನಾಚರಿಸಲು ಸನ್ನದ್ಧವಾಗಿದೆ. ಈ 70 ವರ್ಷಗಳಲ್ಲಿ ಜಾಗತಿಕವಾಗಿ ಸಾಕಷ್ಟು ಬದಲಾವಣೆಗಳಾಗಿವೆ. ಪ್ರಧಾನಿ ಈ ಹಿಂದೆ 2015ರಲ್ಲಿ ಸಾಮಾನ್ಯಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. 2030ರ ವೇಳೆಗೆ 17 ಸುಸ್ತಿರ ಅಭಿವೃದ್ಧಿಯ ಅಜೆಂಡಾ ರೂಪಿಸಲಾಯಿತು.
ಪ್ರಮುಖವಾಗಿ ಎರಡು ಆದ್ಯತೆಗಳನ್ನ ಗುರುತಿಸಲಾಗಿತ್ತು. ಒಂದು ಅಭಿವೃದ್ಧಿ ಮತ್ತೊಂದು ಪರಿಸರ ರಕ್ಷಣೆ. ಈ ಬಗ್ಗೆ ನಿರ್ಧಾರವನ್ನೂ ಕೈಗೊಳ್ಳಲಾಗಿತ್ತು. ಅಂದು ಮೋದಿ ಭಾರತದ ಅಭಿವೃದ್ಧಿ ಪಥದ ಬಗ್ಗೆ ತಮ್ಮದೇ ಆದ ಕನಸುಗಳನ್ನು ಬಿತ್ತಿ ಬಂದಿದ್ದರು. ಈಗ ಅಂತಹದೇ ಮತ್ತಷ್ಟು ಕನಸಗಳನ್ನು ತೆರದಿಡಲಿದ್ದಾರೆ.
2030ರ ವೇಳೆಗೆ ವಿಶ್ವದ ಎಲ್ಲ ರಾಷ್ಟ್ರಗಳ ಅಭಿವೃದ್ಧಿ ಮತ್ತು ಪರಿಸರ ಉಳಿಸಲು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ರಕ್ಷಣೆ ಗುರಿ ಮುಟ್ಟಲು ಅಂತಾರಾಷ್ಟ್ರೀಯ ಪರಸ್ಪರ ಸಹಕಾರ ಹಾಗೂ ದೇಶೀಯವಾಗಿ ಗುರಿಗಳನ್ನ ನಿಗದಿ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.
ಈ ಬಾರಿ ನ್ಯೂಯಾರ್ಕ್ಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ 23- 24ರಂದು ಅಲ್ಲಿನ ಮಹಾನಗರದಲ್ಲಿ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದೇಶಿ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ವೇಳೆ, 2015ರಲ್ಲಿ ತೆಗೆದುಕೊಂಡ ನಿರ್ಣಯದಂತೆ ಸುಸ್ಥಿರ ಅಭಿವೃದ್ಧಿ ಅಜೆಂಡಾ ಮುಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬೆಳಕು ಚೆಲ್ಲುವ ಸಾಧ್ಯತೆಗಳಿವೆ.
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ಹವಾಮಾನ ನಿಯಂತ್ರಣ( ಕ್ಲೈಮೆಟ್ ಆ್ಯಕ್ಷನ್ ಸಮಿಟ್) ಶೃಂಗಸಭೆ, ಸಾಮೂಹಿಕ ಆರೋಗ್ಯ ಸಂಬಂಧಿತ ಉನ್ನತ ಮಟ್ಟದ ಸಭೆ, ಸುಸ್ಥಿರ ಅಭಿವೃದ್ಧಿ ಗುರಿಯ ಶೃಂಗಸಭೆ ಹಾಗೂ ಸೆಪ್ಟೆಂಬರ್ 24ರಂದು ಮಹತ್ಮಾ ಗಾಂಧಿಜೀಯವರ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಮಹತ್ವದ ಸಭೆ ನಡೆಯಲಿವೆ. ಇವೆಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೋದಿ ವಿಶ್ವದ ಗಮನ ಸೆಳೆಯಲು ಸನ್ನದ್ಧರಾಗಿದ್ದಾರೆ.
2014ರಲ್ಲಿ ಪ್ರಧಾನಿ ಮೋದಿ ಎಸ್ಡಿಜಿಎಸ್ ಸಭೆಯಲ್ಲಿ ಜೂನ್ 21 ಅನ್ನು ಜಾಗತಿಕ ಯೋಗ ದಿನವನ್ನಾಗಿ ಆಚರಿಸಲು ಜಾಗತಿಕ ಸಮುದಾಯಕ್ಕೆ ಮನವಿ ಮಾಡಿದ್ದರು. ಮೋದಿಯವರ ಈ ಕೋರಿಕೆಯನ್ನು 177 ರಾಷ್ಟ್ರಗಳು ಕೇವಲ 75 ದಿನಗಳಲ್ಲಿ ಒಪ್ಪುವ ಮೂಲಕ ಸಮ್ಮತಿ ಸೂಚಿಸಿದ್ದರು. ಪರಿಣಾಮ ಪ್ರತಿವರ್ಷ ಜೂನ್ 21ರಂದು ವಿಶ್ವ ಯೋಗದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ನವೀಕರಿಸಬಹುದಾದ ಇಂಧನಗಳ ವಲಯದಲ್ಲಿ ಭಾರತ ಅದ್ಬುತ ಸಾಧನೆ ಮಾಡಿದೆ. 2019ರ ಮಧ್ಯಭಾಗದವರಿಗೆ ಭಾರತ ನವೀಕರಿಸಬಹುದಾದ ಇಂಧನದಲ್ಲಿ ಸುಮಾರು 80 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಈ ನಡುವೆ ಭಾರತ ವಿಶ್ವಸಂಸ್ಥೆಯ ಕೇಂದ್ರ ಕಚೇರಿಗೆ ಸೋಲಾರ್ ಪ್ಯಾನಲ್ಗಳನ್ನು ಕೊಡುಗೆ ನೀಡಿದೆ. ಪ್ರಧಾನಿ ಭೇಟಿ ವೇಳೆ ಈ ಸೋಲಾರ್ ಪ್ಯಾನಲ್ಗಳ ಉದ್ಘಾಟನೆಯೂ ಸಹ ನೆರವೇರಲಿದೆ. ಈ ಮೂಲಕ ಸ್ವಚ್ಛ ವಿದ್ಯುತ್ಗೆ ಭಾರತ ತನ್ನದೇ ಕೊಡುಗೆ ನೀಡಲು ಅಡಿ ಇಟ್ಟಿದೆ. ಜೊತೆಗೆ ಹವಾಮಾನ ವೈಪರೀತ್ಯಕ್ಕೆ ಭಾರತ ಎಷ್ಟರ ಮಟ್ಟಿಗೆ ಸಜ್ಜಾಗಿದೆ ಎಂಬುದನ್ನು ಸಹ ಸಂಕೇತಿಸುತ್ತದೆ.
ಸುಸ್ಥಿರ ಅಭಿವೃದ್ಧಿಯ ಅಂದರೆ ಎಸ್ಡಿಜಿ -7 ಅಡಿ ಸ್ವಚ್ಛ ವಿದ್ಯುತ್, ಎಸ್ಡಿಜಿ- 3ರ ಅಡಿ ಭಾರತ ಈಗಾಗಲೇ ಎಲ್ಲರಿಗೂ ಆರೋಗ್ಯ ಎಂಬ ಘೋಷವಾಕ್ಯದೊಂದಿಗೆ ಆಯುಷ್ಮಾನ್ ಭಾರತ ಯೋಜನೆಯನ್ನ ಜಾರಿಗೆ ತಂದಿದ್ದು, ಸುಮಾರು 50 ಕೋಟಿ ಭಾರತೀಯರು ಈ ಯೋಜನೆ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಎಸ್ಡಿಜಿ- 6 ಅಡಿ ಭಾರತ ಸ್ವಚ್ಛ ಭಾರತ ಯೋಜನೆ ಅಡಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಇದು ಸಹ ಜಾಗತಿಕ ಸುಸ್ಥಿರ ಅಭಿವೃದ್ಧಿ ಯೋಜನೆ ಅಡಿ ತಾವು ಇಂತಿಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂಬುದನ್ನು ವಿಶ್ವಕ್ಕೆ ತೋರಿಸಲು ಪ್ರಧಾನಿ ಮುಂದಾಗಿದ್ದಾರೆ.
ಸುಸ್ಥಿರ ಅಭಿವೃದ್ಧಿ ಇಲ್ಲದೇ ಶಾಂತಿ ಅಸಾಧ್ಯ, ಶಾಂತಿ ಇಲ್ಲದೇ ಅಭಿವೃದ್ಧಿಯೂ ಕಷ್ಟಕರ. ಭಾರತ ತನ್ನ ಬಹುಪಕ್ಷೀಯತೆ ಮತ್ತು ಬಹುತ್ವದ ಉದ್ದೇಶ ಹಾಗೂ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಬಗ್ಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ಹಾಗೂ ವಿಶ್ವ ನಾಯಕರ ಗಮನ ಸೆಳೆಯುವ ಸಾಧ್ಯತೆ ಇದೆ. ಇನ್ನೂ ವಿಶೇಷ ಎಂದರೆ, ಈ ಬಾರಿಯೂ ವಿಶ್ವಸಂಸ್ಥೆ ಸುಧಾರಣೆ, ಭದ್ರತಾ ಮಂಡಳಿಯ ವಿಸ್ತರಣೆ ಬಗ್ಗೆ ವಿಶ್ವನಾಯಕರನ್ನು ಪ್ರಧಾನಿ ಒತ್ತಾಯಿಸುವ ಸಾಧ್ಯತೆ ಇದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಸ್ತರಣೆ ಹಾಗೂ ಸುಧಾರಣೆ ಭಾರತದ ಪರ ಹಿತಚಿಂತನೆಯೇನೂ ಅಲ್ಲ. ಆದರೆ, ವಿಶ್ವಸಂಸ್ಥೆ ಕೈಗೊಳ್ಳುವ ಒಂದು ನಿರ್ಣಯ ಭಾರತದ ಭವಿಷ್ಯ ಹಾಗೂ ಪ್ರಮುಖ ಶಕ್ತಿ ಕೇಂದ್ರವಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ. ಇನ್ನು ವಿಶ್ವಸಂಸ್ಥೆ ನೀತಿ ನಿರ್ಧಾರ ತೆಗೆದುಕೊಳ್ಳುವ ಪ್ರಮುಖ ಭಾಗವಾಗಬೇಕಿದೆ.
ಕಳೆದ 50 ವರ್ಷಗಳಲ್ಲಿ ವಿಶ್ವಸಂಸ್ಥೆಯಲ್ಲಿ ಚೀನಾ ಭಾರತ- ಪಾಕಿಸ್ತಾನ ಸಂಬಂಧ ತಳೆದಿರುವ ನಿಲುವು ಎಲ್ಲವನ್ನೂ ಹೇಳುತ್ತಿದೆ. ಚೀನಾ ಭಾರತ ವಿಶ್ವಸಂಸ್ಥೆ ಕಾಯಂ ಸದಸ್ಯನಾಗಲು ಅಡ್ಡಿಯಾಗಿದೆ. ಈ ನಡುವೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ. ಪೂರ್ವ ಇಂಡೋ- ಪೆಸಿಫಿಕ್ ವಿಭಾಗ, ಯೆಮನ್, ಇರಾನ್ ಮತ್ತು ಅಫ್ಘಾನಿಸ್ತಾನದ ಭಾಗಕ್ಕೆ ಸಂಬಂಧಪಟ್ಟಂತೆ ವಿಶ್ವಸಂಸ್ಥೆ ತಳೆಯುವ ನಿರ್ಧಾರಗಳಲ್ಲಿ ಭಾರತ ಪ್ರಮುಖ ಪಾತ್ರ ನಿರ್ವಹಿಸಬೇಕಾದ ಅಗತ್ಯತೆ ಇದೆ.
ವೆಸ್ಟರ್ನ್ ಇಂಡೋ- ಪೆಸಿಫಿಕ್ ವಿಭಾಗದಲ್ಲಿ ಭಾರತದ ಹಿತಾಸಕ್ತಿ ಇದೆ. ಈ ಭಾಗದಲ್ಲಿ ಸುಮಾರು 80 ಲಕ್ಷ ಭಾರತೀಯ ನಾಗರಿಕರು ವಾರ್ಷಿಕ 40 ಬಿಲಿಯನ್ ಡಾಲರ್ ಹಣವನ್ನು ಭಾರತಕ್ಕೆ ರವಾನಿಸುತ್ತಿದ್ದಾರೆ. ಈ ವಲಯದಲ್ಲಿ ಭಾರತ ತೈಲ ಖರೀದಿ ಮಾಡುತ್ತಿದ್ದು, ಇದು ವ್ಯಾಪಾರ ದೃಷ್ಟಿಯಿಂದಲೂ ಭಾರೀ ಮಹತ್ವದ ಪ್ರದೇಶವಾಗಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸದಸ್ಯತ್ವ ಉಳ್ಳ ಪ್ರಮುಖ ರಾಷ್ಟ್ರಗಳು ಸಾರ್ವಭೌಮತ್ವ ಹೊಂದಿದ್ದು, ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸಹಕಾರದೊಂದಿಗೆ ಭಾರತ ಇಲ್ಲಿ ನಾಯಕತ್ವ ನೀಡುವುದು ಸವಾಲು ಸಹ ಹೌದು.
ಈ ನಡುವೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಜೂನ್ 14 2019 ರಲ್ಲಿ ಬಹುಪಕ್ಷೀಯತೆಯಲ್ಲಿ ನಂಬಿಕೆ ಎಂಬ ನಿರ್ಣಯವನ್ನು ಕೈಗೊಂಡಿದೆ. ಇದೇ ಆಶಯವನ್ನ ನಿರ್ಣಯವನ್ನ 75ನೇ ವಾರ್ಷಿಕೋತ್ಸವದ ಸಮಿಟ್ನಲ್ಲಿ ಕಾರ್ಯಗತ ಮಾಡುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಭಾರತ ಪ್ರಮುಖ ಪಾತ್ರವಹಿಸಬೇಕಿದೆ. ಸೆಪ್ಟೆಂಬರ್ 27 ರಂದು ವಿಶ್ವಸಂಸ್ಥೆ ಉದ್ದೇಶಿಸಿ ಮಾತನಾಡಲಿದ್ದು, ಜಾಗತಿಕವಾಗಿ ಶಾಂತಿ ಕಾಪಾಡುವುದು. ಭದ್ರತೆ ಹಾಗೂ ಸುಸ್ಥಿರ ಅಭಿವೃದ್ಧಿ ಎಲ್ಲರಿಗೂ ಉತ್ತಮ ಬದುಕು ನೀಡುವ ಬಗ್ಗೆ ಹೆಚ್ಚಿನ ಒತ್ತು ನೀಡಿ ಪ್ರತಿಪಾದನೆ ಮಾಡಬೇಕಿದೆ.
ಅಶೋಕ್ ಮುಖರ್ಜಿ, ವಿಶ್ವಸಂಸ್ಥೆಯ ಭಾರತದ ಮಾಜಿ ಖಾಯಂ ಪ್ರತಿನಿಧಿ