ಫಿರೊಝಾಬಾದ್(ಉತ್ತರ ಪ್ರದೇಶ): ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪ್ರಬಾಲ್ ನಗರ ಎಸ್ಪಿ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಅಚಮಾನ್ ಉಪಾಧ್ಯಾಯ ಬಂಧಿತ ಆರೋಪಿ. ಆರು ತಿಂಗಳಿಗೆ ಮುಂಚೆ ಯುವತಿವೋರ್ವಳ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಅಚಮಾನ್ ಉಪಾಧ್ಯಾಯ ಪ್ರಮುಖ ಆರೋಪಿಯಾಗಿದ್ದ. ಆದರೆ, ಈತ ಮಾತ್ರ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಪೊಲೀಸರು ಈತನನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ ಘೋಷಿಸಿದ್ದರು. ಈ ನಡುವೆ ಫಿರೊಝಾಬಾದ್ನ ತಿಲಕ್ ನಗರ್ ಪ್ರದೇಶದಲ್ಲಿ ಸಂತ್ರಸ್ತೆ ಯುವತಿಯ ತಂದೆಯ ಹತ್ಯೆ ನಡೆದಿತ್ತು. ಯುವತಿಯನ್ನು ಅತ್ಯಾಚಾರ ಮಾಡಿದ್ದ ಅರೋಪಿಯೇ ಆಕೆಯ ತಂದೆಯನ್ನೂ ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದರು. ಈ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿ ಅಚಮಾನ್ ಉಪಾಧ್ಯಾಯನನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆ ವೇಳೆ ಅಚಮಾನ್ ಜೊತೆಗೆ ಆತನ ಇಬ್ಬರು ಸಹಚರರು ಇದ್ದರು. ಅದರಲ್ಲಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನೋರ್ವ ತಪ್ಪಿಸಿಕೊಂಡಿದ್ದಾನೆ. ಕಾರ್ಯಾಚರಣೆಯಲ್ಲಿ ಓರ್ವ ಪೊಲೀಸ್ ಅಧಿಕಾರಿಗೆ ಗುಂಡು ತಗುಲಿ, ಗಾಯವಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.