ಆಲಪ್ಪುಝ (ಕೇರಳ): ಕೇರಳ ನೆರೆ ಸಂತ್ರಸ್ತರರಿಗೆ ರಾಮೋಜಿ ಗ್ರೂಪ್ ವತಿಯಿಂದ ನಿರ್ಮಿಸಿರುವ 121 ಮನೆಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಡಿಸೆಂಬರ್ 8 ರಂದು ಹಸ್ತಾಂತರ ಮಾಡಲಿದ್ದಾರೆ.
ಮಹಿಳಾ ಸ್ವಸಹಾಯ ಸಂಸ್ಥೆ ಕುಂಭಶ್ರೀ, ನಿಗದಿತ ಅವಧಿಯೊಳಗೆ ಈ ಎಲ್ಲಾ ಮನೆಗಳನ್ನು ನಿರ್ಮಾಣ ಮಾಡಿದೆ. ಕುಂಭಶ್ರೀ ಮತ್ತು ಐ ಆ್ಯಮ್ ಫಾರ್ ಆಲೆಪ್ಪಿ ಸಂಸ್ಥೆಗಳು ಜಂಟಿಯಾಗಿ ಕೇವಲ 40 ದಿನಗಳ ನಿಗದಿತ ಅವಧಿಯಲ್ಲಿ ಮನೆಗಳ ನಿರ್ಮಾಣ ಮಾಡಿದ್ದು, ನೆರೆ ಸಂತ್ರಸ್ತರಿಗಾಗಿ ಅತೀ ವೇಗದಲ್ಲಿ ನಿರ್ಮಾಣವಾದ ಮನೆಗಳೆಂಬ ದಾಖಲೆ ನಿರ್ಮಿಸಿದೆ.
ಆಲಪ್ಪುಝ ಜಿಲ್ಲಾಧಿಕಾರಿ ವಿ.ಆರ್ ಕೃಷ್ಣ ತೇಜಾ ನಿರ್ದೇಶನದಲ್ಲಿ, ಭವಿಷ್ಯದಲ್ಲಿ ಉಂಟಾಗುವ ನೆರೆ ಹಾವಳಿಯಿಂದ ಸಂರಕ್ಷಣೆ ಹೊಂದುವ ರೀತಿಯಲ್ಲಿ, ತಳ ಮಟ್ಟದಿಂದ ಒಂದೂವರೆ ಮೀಟರ್ ಎತ್ತರದಲ್ಲಿ ಎಲ್ಲಾ ಮನೆಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಇನ್ನೊಂದು ಭಾರಿ ನೆರೆ ಬಂದರೆ ಮನೆಯೊಳಗೆ ನೀರು ನುಗ್ಗದಂತೆ ತಡೆಯಬಹುದು.
ಆರಂಭದಲ್ಲಿ ನೆರೆ ಸಂತ್ರಸ್ತರಿಗೆ 117 ಮನೆಗಳನ್ನು ನಿರ್ಮಿಸುವ ಯೋಜನೆ ರೂಪುಗೊಂಡಿತ್ತು. ಬಳಿಕ ಅದನ್ನು 123ಕ್ಕೆ ವಿಸ್ತರಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳು ಹಾಗೂ ಕಚ್ಚಾ ವಸ್ತುಗಳನ್ನು ಬಳಸಿ ಆಧುನಿಕವಾಗಿ ಮನೆಗಳನ್ನು ರೆಡಿ ಮಾಡಲಾಗಿದೆ. ಸದ್ಯ ನಿರ್ಮಾಣಗೊಂಡಿರುವ ಮನೆಗಳ ಹಾಗೆಯೇ ಸಮುದ್ರ ಮಟ್ಟಕ್ಕಿಂತ ಕೆಳಗಿರುವ ಕುಟ್ಟನಾಡಿನಲ್ಲೂ ಇದೇ ರೀತಿಯ ಮನೆಗಳನ್ನು ನಿರ್ಮಾಣ ಮಾಡಬೇಕೆಂದು ಕಟ್ಟಡ ನಿರ್ಮಾಣ ಕ್ಷೇತ್ರಗಳ ತಜ್ಞರು ಕೋರಿದ್ದಾರೆ.
ಮನೆಗಳ ಹಸ್ತಾಂತರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯೊಂದಿಗೆ, ಸಚಿವರು, ಚಲನಚಿತ್ರ ನಟರು, ಕಲಾವಿದರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಸಾಕ್ಷಿಯಾಗಲಿದ್ದಾರೆ.