ಜೈಪುರ: ರಾಜ್ಯಗಳ ಪರಸ್ಪರ ಒಪ್ಪಿಗೆಯೊಂದಿಗೆ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ಹಂತ ಹಂತವಾಗಿ ರಾಜಸ್ಥಾನದಿಂದ ಹೊರ ಹೋಗಲು ಹಾಗೂ ಬೇರೆ ರಾಜ್ಯದಿಂದ ಹಿಂತಿರುಗಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಸಂಬಂಧಪಟ್ಟ ರಾಜ್ಯ ಸರ್ಕಾರದಿಂದ ಅಗತ್ಯ ಅನುಮತಿ ಮತ್ತು ಸರಿಯಾದ ವ್ಯವಸ್ಥೆಗಳನ್ನು ಪಡೆದ ನಂತರವೇ ಈ ಕಾರ್ಮಿಕರು ತಮ್ಮ ಮನೆಗೆ ತಲುಪಲು ಸಾಧ್ಯವಾಗುತ್ತದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ನಡೆಸಿದ ಗೆಹ್ಲೋಟ್, ಕಾರ್ಮಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳ ಬಳಿ ಚರ್ಚಿಸಿದ್ದಾರೆ.
ಮನೆಗೆ ಮರಳಲು ಬಯಸುವ ವಲಸೆ ಕಾರ್ಮಿಕರು ಸಹಾಯವಾಣಿ ಸಂಖ್ಯೆ 1800 180 6127 ಅಥವಾ ಇ ಮಿತ್ರಾ ರಾಜಸ್ಥಾನ ಪೋರ್ಟಲ್ ಅಥವಾ ಇ-ಮಿತ್ರ ಮೊಬೈಲ್ ಅಪ್ಲಿಕೇಶನ್, ಇ-ಮಿತ್ರ ಕಿಯೋಸ್ಕ್ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಎಂದು ಇದೇ ವೇಳೆ ಸೂಚಿಸಿದರು.
ಕಾರ್ಮಿಕರ ನೋಂದಣಿಯ ನಂತರ ರಾಜ್ಯ ಸರ್ಕಾರವು ಸಂಬಂಧಪಟ್ಟ ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆಯುತ್ತದೆ. ನೋಂದಾಯಿತ ವಲಸಿಗರು ಮತ್ತು ಕಾರ್ಮಿಕರ ಸಂಖ್ಯೆಯ ಪ್ರಕಾರ ನಿಗದಿತ ದಿನಾಂಕ ಮತ್ತು ಸಮಯದ ಪ್ರಕಾರ ಅವರನ್ನು ತಮ್ಮ ಮನೆಗಳಿಗೆ ಹೋಗಲು ಅನುಮತಿಸಲಾಗುತ್ತದೆ. ತಮ್ಮ ಸ್ವಂತ ವಾಹನದಲ್ಲಿ ರಾಜಸ್ಥಾನಕ್ಕೆ ಹಿಂತಿರುಗಲು ಬಯಸುವ ವ್ಯಕ್ತಿ ತನ್ನ ನೋಂದಣಿ ಸಮಯದಲ್ಲಿ ಅದನ್ನು ವಾಹನದ ಬಗ್ಗೆ ನಮೂದಿಸಬೇಕಾಗಿದೆ ಎಂದರು.