ನವದೆಹಲಿ: ಇದೇ ತಿಂಗಳ 21ರಂದು ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮುಖಂಡರು ಮಾತ್ರ ಚುನಾವಣೆಯಲ್ಲಿ ಅಷ್ಟೇನೂ ಆಸಕ್ತಿ ತೋರಿದಂತಿಲ್ಲ.
ಎಐಸಿಸಿ ಅಧ್ಯಕ್ಷ ಗಾದಿ ತೊರೆದಿರುವ ರಾಹುಲ್ ಗಾಂಧಿ ಪಕ್ಷ ಸಂಘಟಿಸುವ ಕಾರ್ಯದಲ್ಲಾಗಲಿ, ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುವ ವಿಚಾರದಲ್ಲಿ ಹಿಂದುಳಿದಿದ್ದಾರೆ. ರಾಗಾ ಇಲ್ಲಿತನಕ ಮಹಾರಾಷ್ಟ್ರದಲ್ಲಿ ಐದು ಹಾಗೂ ಹರಿಯಾಣದಲ್ಲಿ ಒಂದೇ ಒಂದು ಚುನಾವಣಾ ರ‍್ಯಾಲಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಪಕ್ಷದ ಮತ್ತೋರ್ವ ನಾಯಕಿ ಹಾಗೂ ರಾಹುಲ್ ತಾಯಿ ಸೋನಿಯಾ ಗಾಂಧಿ ಇನ್ನೂ ಪ್ರಚಾರo ಅಖಾಡಕ್ಕೆ ಧುಮುಕ್ಕಿಲ್ಲ ಎನ್ನುವುದೇ ವಿಶೇಷ. ಪಕ್ಷದ ಮೂಲಗಳ ಪ್ರಕಾರ, ಸೋನಿಯಾ ಗಾಂಧಿ ಅ.18ರಂದು ಹರಿಯಾಣದ ಮಹೇಂದ್ರಗಢ ಜಿಲ್ಲೆಯಲ್ಲಿ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಸೋನಿಯಾ ಪ್ರಚಾರ ನಡೆಸುವ ಸಾಧ್ಯತೆ ತೀರಾ ಕಮ್ಮಿ ಎನ್ನುತ್ತವೆ 'ಕೈ' ಮೂಲಗಳು.
ಪಕ್ಷದ ಸ್ಟಾರ್ ಕ್ಯಾಂಪೇನರ್ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದ್ದ ರಾಗಾ ಸಹೋದರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸಹ ಪ್ರಚಾರದತ್ತ ಮುಖ ಮಾಡಿಲ್ಲ.
ನಾಯಕರಲ್ಲೇ ಏಕೆ ಈ ನಿರಾಸಕ್ತಿ?
ಲೋಕಸಭಾ ಚುನಾವಣೆಯ ಶೋಚನೀಯ ಸೋಲಿನ ಬಳಿಕ ರಾಹುಲ್ ಗಾಂಧಿ 'ಕೈ' ನಾಯಕರ ಮಾತಿಗೆ ಮನ್ನಣೆ ನೀಡದೆ ಎಐಸಿಸಿ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಿದರು. ಸೋಲಿನ ಪರಾಮರ್ಶೆಯಲ್ಲಿದ್ದ ಪಕ್ಷಕ್ಕೆ ಇದು ದೊಡ್ಡ ಹಿನ್ನಡೆ ನೀಡಿತು.
ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಕಾಂಗ್ರೆಸ್ನಲ್ಲಿ ಮೊದಲಿನ ಉತ್ಸಾಹ ಕಾಣುತ್ತಿಲ್ಲ. ಬಿಜೆಪಿಯನ್ನು ಮಣಿಸುವ ರಣತಂತ್ರ ಹೂಡುವಲ್ಲಿಯೂ ಕಾಂಗ್ರೆಸ್ ಹಿಂದುಳಿದಿದೆ. ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ವೇಳೆಯಲ್ಲೂ ರಾಹುಲ್ ಸಕ್ರಿಯವಾಗಿ ಭಾಗಿಯಾಗಿರಲಿಲ್ಲ. ಆಡಳಿತ ಪಕ್ಷದ ಕೆಲ ತಪ್ಪು ನಿರ್ಣಯಗಳನ್ನು ಸೂಕ್ತವಾಗಿ ತಿರುಗೇಟು ನೀಡುವ ನಾಯಕತ್ವದ ಕೊರತೆ ಕಾಂಗ್ರೆಸ್ ಪಕ್ಷಕ್ಕೆ ಬಲವಾಗಿ ಕಾಡುತ್ತಿದೆ.
ಹರಿಯಾಣದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತಿದೆ. ಮಹಾರಾಷ್ಟ್ರದಲ್ಲಿ ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸಜ್ಜಾಗಿದೆ.
ಅ.21ರಂದು ಈ ಎರಡೂ ರಾಜ್ಯದಲ್ಲಿ ಚುನಾವಣೆ ನಡೆದು ಅ.24ರಂದು ಮತ ಎಣಿಕೆ ನಡೆಯಲಿದೆ.