ಚಂಡೀಗಢ: ಮಾಜಿ ಬಿಜೆಪಿ ಸಚಿವರ ಮನೆಯ ಹೊರಗೆ ಗೋವಿನ ಸಗಣಿ ಎಸೆದ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಸೆಕ್ಷನ್ 307 (ಕೊಲೆ ಯತ್ನ) ಪ್ರಕರಣವನ್ನು ಹಿಂಪಡೆಯಲು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆದೇಶಿಸಿದ್ದಾರೆ.
ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅವರನ್ನು ವರ್ಗಾವಣೆ ಮಾಡಲು ಆದೇಶ ಕೂಡ ನೀಡಿದ್ದಾರೆ. ಘಟನೆಯನ್ನು ಈಗ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ.
ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲಿಸುವಲ್ಲಿ ಎಸ್‌ಎಚ್‌ಒ ಅತಿರೇಕ ತೋರಿಸಿದೆ. ಕೊಲೆ ಮಾಡಲು ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಸಿಎಂ ಹೇಳಿದ್ದಾರೆ.
ಇದರ ನಡುವೆಯೇ ವಿಡಿಯೋವೊಂದರಲ್ಲಿ ಗನ್ ಸಂಸ್ಕೃತಿಯನ್ನು ಉತ್ತೇಜಿಸಿದ್ದಕ್ಕಾಗಿ ಪಂಜಾಬಿ ಗಾಯಕ ಶ್ರೀಬ್ರಾರ್ ಅವರ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ. ಗನ್ ಸಂಸ್ಕೃತಿಯನ್ನು ಉತ್ತೇಜಿಸುವುದು ತಪ್ಪು. ಗಾಯಕನ ಹಳೆಯ ಹಾಡಿಗೆ ಸಂಬಂಧಿಸಿದ ವಿಷಯದಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ ಎಂದರು.
ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸುವ ವಿಡಿಯೋಗು ಈತನ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ. ಯುವಕರ ಮನಸ್ಥಿತಿ ಹಾಳು ಮಾಡುವಂತೆ ಬಂದೂಕುಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸುವ ಹಾಗೆ ಇದ್ದ ಅವರ ಹಳೆಯ ಹಾಡಿನ ಋಣಾತ್ಮಕ ಪರಿಣಾಮಗಳ ಬಗ್ಗೆ ಗಮನ ಹರಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಗಡಿಯುದ್ದಕ್ಕೂ ನಿರಂತರ ಬೆದರಿಕೆಗಳನ್ನು ಎದುರಿಸುತ್ತಿರುವ ಪಂಜಾಬ್ ಗಡಿ ರಾಜ್ಯವಾಗಿದೆ. ರಾಜ್ಯದ ಶಾಂತಿಯನ್ನು ಯಾವುದೇ ರೀತಿಯಲ್ಲೂ ತೊಂದರೆಗೊಳಗಾಗಲು ನಾವು ಅನುಮತಿಸುವುದಿಲ್ಲ ಎಂದು ಇದೇ ವೇಳೆ ಸಿಎಂ ಹೇಳಿದರು.