ಕಠ್ಮಂಡು/ಆಯೋಧ್ಯೆ: ಭಗವಾನ್ ರಾಮ ನೇಪಾಳಿ ಮತ್ತು ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ ಎಂದು ಅಲ್ಲಿನ ಪ್ರಧಾನಿ ಕೆ.ಪಿ. ಶರ್ಮಾ ಒಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಆಯೋಧ್ಯೆ ಪುರೋಹಿತರು ಕೆಂಡಾಮಂಡಲವಾಗಿದ್ದಾರೆ.
ಪ್ರಧಾನಿ ಒಲಿ, ಭಾರತ ವಿರೋಧಿ ಹೇಳಿಕೆಗಳನ್ನು ನಿಲ್ಲಿಸುವಂತೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ನಾಯಕರು ಒತ್ತಾಯಿಸುತ್ತಲೇ ಇದ್ದರೂ, ಅವರು ತಮ್ಮ ವರಸೆಯನ್ನು ಮಾತ್ರ ಬದಲಾಯಿಸಿಲ್ಲ. ತಮ್ಮ ಸರ್ಕಾರವನ್ನು ಉರುಳಿಸಲು ನವದೆಹಲಿಯಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಈ ಹಿಂದೆ ಒಲಿ ಆರೋಪಿಸಿದ್ದರು. ಪ್ರಧಾನಿ ಒಲಿ ರಾಜೀನಾಮೆಗೆ ಒತ್ತಡಗಳು ಕೇಳಿ ಬರುತ್ತಿರುವ ನಡುವೆಯೇ, ಚೀನಾದ ನೇಪಾಳ ರಾಯಭಾರಿ ಹೌ ಯಾಂಕಿ ಆಡಳಿತ ಪಕ್ಷದ ಮುಖಂಡರು ಮತ್ತು ಅಧ್ಯಕ್ಷೆ ಬಿಧ್ಯಾ ದೇವಿ ಭಂಡಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಮಧ್ಯೆ, ಒಲಿ ಹೇಳಿಕೆಯನ್ನು ಅಯೋಧ್ಯೆಯ ಪುರೋಹಿತರು ಖಂಡಿಸಿದ್ದು, ಅವರು ಚೀನಾದ ಒತ್ತಡದಿಂದಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
"ಭಗವಾನ್ ರಾಮನು ಇಲ್ಲಿ ಜನಿಸಿದನು. ಅವನು ಇಲ್ಲಿ ಜನಿಸಿದ್ದು ಸರಾಯು ನದಿಯ ಬಳಿಯ ಅಯೋಧ್ಯೆಯಲ್ಲಿ. ಅವನು ಅಯೋಧ್ಯೆಗೆ ಸೇರಿದವನು ಎಂಬುದು ಮೊದಲಿನಿಂದಲೂ ಬಂದಿರುವ ನಂಬಿಕೆ. ಸೀತಾ ಜಿ (ಭಗವಾನ್ ರಾಮನ ಪತ್ನಿ) ನೇಪಾಳದವರು ಎಂಬುದು ನಿಜ. ಆದರೆ ಭಗವಾನ್ ರಾಮ ನೇಪಾಳಿ ಎಂದಿರುವುದು ತಪ್ಪು ಹೇಳಿಕೆ. ಒಲಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ "ಎಂದು ರಾಮ್ ಟೆಂಪಲ್ ಟ್ರಸ್ಟ್ ಸದಸ್ಯ ಮಹಂತ್ ದಿನೇಂದ್ರ ದಾಸ್ ಹೇಳಿದ್ದಾರೆ.
ಒಲಿ ನೇಪಾಳ ಮತ್ತು ಪಾಕಿಸ್ತಾನದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರಾಮ್ ದಲ್ ಟ್ರಸ್ಟ್ ಅಧ್ಯಕ್ಷ ಕಲ್ಕಿ ರಾಮ್ ದಾಸ್ ಮಹಾರಾಜ್ ಹೇಳಿದ್ದು,. "ಅವರ ಅಭಿಪ್ರಾಯವನ್ನು ನಾನು ಖಂಡಿಸುತ್ತೇನೆ. ನೇಪಾಳ ಹಿಂದೂ ರಾಷ್ಟ್ರವಾಗಿದ್ದರೂ, ಈಗ ಚೀನಾ ಮತ್ತು ಪಾಕಿಸ್ತಾನದ ಪರವಾಗಿ ಕೆಲಸ ಮಾಡುತ್ತಿದೆ" ಎಂದಿದ್ದಾರೆ.
"ನಮ್ಮ ಧಾರ್ಮಿಕ ಪುಸ್ತಕಗಳಲ್ಲಿ ಒಂದು ಸಾಲು ಇದೆ," ಜಿಸ್ಕೆ ಉತ್ತರ ದಿಶಾ ಮಿ ಸರಾಯು ಪ್ರವಾಹೀತ್ ಹೋತಿ ಹೈ, ವೋ ಅಯೋಧ್ಯೆ ಹೈ " (ಪೂರ್ವದಲ್ಲಿ ಸರಾಯು ನದಿ ಹರಿಯುವ ಸ್ಥಳ ಅಯೋಧ್ಯೆ) ನೇಪಾಳದಲ್ಲಿ ಸರಯು ನದಿ ಇಲ್ಲ. ಹಾಗಾಗಿ ಅಯೋಧ್ಯೆ ನೇಪಾಳದಲ್ಲಿ ಆಗಲು ಹೇಗೆ ಸಾಧ್ಯ, ರಾಮ ಹೇಗೆ ನೇಪಾಳಿಯಾಗುತ್ತಾನೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಒಂದು ತಿಂಗಳೊಳಗೆ ಅವರನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಿಗೊಳಿಸಲಾಗುವುದು ಎಂದು ಸವಾಲು ಹಾಕಿದ್ದಾರೆ.
ಮತ್ತೊಬ್ಬರು ಪುರೋಹಿತ ಮಹಂತ್ ಪರಮಹಂಸ ಆಚಾರ್ಯ ಕೂಡ ಒಲಿ ಹೇಳಿಕೆಯನ್ನು ವಿರೋಧಿಸಿದ್ದು,"ಒಲಿ ನೇಪಾಳಿ ಅಲ್ಲ, ಅವರ ದೇಶದ ಇತಿಹಾಸದ ಬಗ್ಗೆ ಅವರಿಗೇ ಅರಿವಿಲ್ಲ. ಅವರು ನೇಪಾಳಕ್ಕೆ ದ್ರೋಹ ಮಾಡುತ್ತಿದ್ದಾರೆ. ಚೀನಾ ಎರಡು ಡಜನ್ಗಿಂತಲೂ ಹೆಚ್ಚು ನೇಪಾಳಿ ಗ್ರಾಮಗಳನ್ನು ವಶಪಡಿಸಿಕೊಂಡಿದೆ. ಅದನ್ನು ಮರೆಮಾಚಲು ರಾಮನ ಹೆಸರನ್ನು ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.
"ಭಗವಾನ್ ರಾಮ ಇಡೀ ವಿಶ್ವಕ್ಕೆ ಸೇರಿದವನು. ಅವನು ಇಲ್ಲಿ ಅಯೋಧ್ಯೆಯಲ್ಲಿ ಜನಿಸಿದ್ದು. ಒಲಿ ತನ್ನ ಜನರಿಗೆ ದ್ರೋಹ ಮಾಡುತ್ತಿದ್ದಾರೆ. ನೇಪಾಳದ ಜನರು ಅವರ ವಿರುದ್ಧ ಪ್ರತಿಭಟಿಸಬೇಕು, ಇಲ್ಲದಿದ್ದರೆ ಅವರು ಕೆಟ್ಟ ದಿನಗಳನ್ನು ಎದುರಿಸಬೇಕಾಗುತ್ತದೆ. ಅವರು ಏನು ಹೇಳಿದರೂ ಇಲ್ಲಿ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ಆಚಾರ್ಯ ಹೇಳಿದ್ದಾರೆ.
ಕಠ್ಮಂಡುವಿನ ಪ್ರಧಾನಮಂತ್ರಿ ನಿವಾಸದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ, ಭಗವಾನ್ ರಾಮ ಭಾರತೀಯನಲ್ಲ ಮತ್ತು ನಕಲಿ ಅಯೋಧ್ಯೆಯನ್ನು ಸೃಷ್ಟಿಸುವ ಮೂಲಕ ಸಾಂಸ್ಕೃತಿಕ ಅತಿಕ್ರಮಣ ಮಾಡಲಾಗುತ್ತಿದೆ ಎಂದು ಒಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.