ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಸೇರಿ ಶಿವಸೇನೆ ಮೈತ್ರಿ ಮಾಡಿಕೊಳ್ಳಬೇಕಾದರೆ 50:50 ಸೂತ್ರಕ್ಕೆ ಒಪ್ಪಿಗೆ ಸೂಚಿಸಿಬೇಕು. ಹಾಗಾದಲ್ಲಿ ಮಾತ್ರ ಸರ್ಕಾರ ರಚನೆ ಸಾಧ್ಯ ಎಂದು ಈಗಾಗಲೇ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕಡ್ಡಿ ಮುರಿದ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಸರ್ಕಾರ ರಚನೆ ವಿಚಾರ ಮತ್ತಷ್ಟು ಜಟಿಲವಾಗಿದೆ.
ಮಹಾರಾಷ್ಟ್ರದಲ್ಲಿ ತಮ್ಮ ನೇತೃತ್ವದಲ್ಲೇ ಸರ್ಕಾರ ರಚನೆ ಮಾಡಲು ಶಿವಸೇನೆ ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ನಿನ್ನೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಜತೆ ಮಾತುಕತೆ ನಡೆಸಿದೆ. ಇದ್ರೊಂದಿಗೆ ಕಾಂಗ್ರೆಸ್ ಜೊತೆ ಮಾತುಕತೆ ನಡೆಸುವ ಸುಳಿವು ನೀಡಿದೆ.
ಏತನ್ಮಧ್ಯೆ ನವೆಂಬರ್ 7ರೊಳಗೆ ಹೊಸ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವುದು ಎಂದು ಹಣಕಾಸು ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ.
ಶಿವಸೇನೆ ಹಿರಿಯ ಮುಖಂಡ ಸಂಜಯ್ ರಾವತ್ ಮಾತನಾಡಿ, ಬಿಜೆಪಿ ಹೇಳಿದ ಹಾಗೆ ನಾವು ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಮಾಡಲು ಉತ್ಸುಕರಾಗಿದ್ದೇವೆ. ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಶಿವಸೇನೆಯವರೇ ಆಗ್ತಾರೆ ಎಂದಿದ್ದಾರೆ. ಒಂದ್ವೇಳೆ ನಾವೇ ಸ್ಥಿರ ಸರ್ಕಾರ ರಚಿಸಲು ನಿರ್ಧರಿಸಿದ್ರೆ ನಮಗೆ ಜನಬೆಂಬಲ ಸಿಗಲಿದೆ ಎಂದಿದ್ದು, ಶಿವಸೇನೆ+ಎನ್‌ಸಿಪಿ+ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಸುಳಿವು ಸಹ ನೀಡಿದ್ದಾರೆ.
288 ವಿಧಾನಸಭೆ ಕ್ಷೇತ್ರಗಳ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56,ಕಾಂಗ್ರೆಸ್ 44 ಹಾಗೂ ಎನ್‌ಸಿಪಿ 54 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.