ಆಂಧ್ರ ಪ್ರದೇಶ: ಇಲ್ಲಿನ ತಿರುಪತಿಯ ಸಿಮ್ಸ್ ಕೋವಿಡ್ ಆಸ್ಪತ್ರೆಯ ನಿರ್ಮಾಣ ಹಂತದಲ್ಲಿದ್ದ ಛಾವಣಿಯ ಭಾಗ ಕುಸಿದು 6 ತಿಂಗಳ ಗರ್ಭಿಣಿ ನರ್ಸ್ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಕೊನೆಯ ಮಹಡಿಯ ತುರ್ತು ಚಿಕಿತ್ಸಾ ಘಟಕದ ಬಳಿ ಕಟ್ಟಡದ ದುರಸ್ತಿ ಕಾರ್ಯ ನಡೆಯುತ್ತಿತ್ತು.
ಭಾನುವಾರ ರಾತ್ರಿ ಇಟ್ಟಿಗೆ ಹಾಗೂ ಛಾವಣಿಗೆ ಹಾಕಿದ್ದ ಕಾಮಗಾರಿಯ ವಸ್ತುಗಳು ಗಾಳಿಯಲ್ಲಿ ಹಾರಿ ಹೋಗಿದ್ದು, ಈ ವೇಳೆ ಹೊಸದಾಗಿ ನಿರ್ಮಿಸಲಾಗುತ್ತಿದ್ದ ಛಾವಣಿಯ ಭಾಗ ನಲಕ್ಕುರುಳಿ ಘಟನೆ ಸಂಭವಿಸಿದೆ. ಇನ್ನು ಘಟನೆಯಲ್ಲಿ ಇನ್ನಿಬ್ಬರು ಕೋವಿಡ್ ಸೋಂಕಿತರಿಗೂ ಗಾಯಗಳಾಗಿವೆ. ಈ ವೇಳೆ ಅಲ್ಲೇ ಕೆಲಸ ನಿರ್ವಹಿಸುತ್ತಿದ್ದ ನರ್ಸ್ ರಾಧಿಕಾ ಎಂಬುವರು ಸಾವನ್ನಪ್ಪಿದ್ದಾರೆ.
ಕೊರೊನಾ ಹರಡುತ್ತಿರುವ ಹಿನ್ನೆಲೆ 6 ತಿಂಗಳ ಗರ್ಭಿಣಿಯಾದರೂ ಕೆಲಸಕ್ಕೆ ಸ್ವಯಿಚ್ಛೆಯಿಂದ ರಾಧಿಕಾ ಹಾಜರಾಗಿದ್ದರು. ಇನ್ನು ಘಟನೆ ನಡೆದ ಸ್ಥಳಕ್ಕೆ ಬಿಜೆಪಿ ರಾಜ್ಯ ವಕ್ತಾರ ಭಾನು ಪ್ರಕಾಶ್ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.