ನವದೆಹಲಿ: ವೈಯಕ್ತಿಕ ಸಂರಕ್ಷಣಾ ಸಲಕರಣೆಗಳ(ಪಿಪಿಇ) ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸರ್ಕಾರ 30 ಸ್ಥಳೀಯ ತಯಾರಕರನ್ನು ತೊಡಗಿಸಿಕೊಂಡಿದೆ. ಈಗಾಗಲೇ ಆರ್ಡರ್ ನೀಡಲಾಗಿದ್ದ 1.7 ಕೋಟಿ ಪಿಪಿಇ ಮತ್ತು 49,000 ವೆಂಟಿಲೇಟರ್‌ಗಳ ಪೂರೈಕೆ ಪ್ರಾರಂಭವಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಗುರುವಾರ ತಿಳಿಸಿದ್ದಾರೆ.
ವೈಯಕ್ತಿಕ ಸಂರಕ್ಷಣಾ ಸಲಕರಣೆಗಳ ಲಭ್ಯತೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ ಕೇಂದ್ರ ಆರೋಗ್ಯ ಸಚಿವಾಲಯವು ಕೊರೊನಾ ವೈರಸ್ ಸೋಂಕಿನ ಚಿಕಿತ್ಸೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಪಿಪಿಇ ಅಗತ್ಯವಿಲ್ಲ ಎಂದು ಹೇಳಿದರು.
ಸರ್ಕಾರವು ಪಿಪಿಇ ಪೂರೈಕೆಯನ್ನ ಅದರ ಬಳಕೆಯ ಆಧಾರದ ಮೇಲೆ ಮಾಡಿದೆ. ಅಪಾಯದ ಗಡಿಯಲ್ಲಿರುವ ರೋಗಿಗಳಿಗೆ ಪಿಪಿಇ ಬಳಕೆಯ ಅಗತ್ಯವಿದೆಯೇ ಹೊರತು ಕಡಿಮೆ ಮತ್ತು ಮಧ್ಯಮ ಅಪಾಯದ ರೋಗಿಗಳಿಗೆ ಅಲ್ಲ ಎಂದು ಅವರು ಹೇಳಿದರು.
ಪಿಪಿಇಯಲ್ಲಿ ಕವರಲ್ ಮಾತ್ರವಲ್ಲದೇ, ಬೂಟ್, ಕವರಲ್, ಹೆಡ್ ಗೇರ್ ಮತ್ತು ಎನ್ 95 ಮುಖವಾಡಗಳೂ ಇವೆ. ಹೆಚ್ಚಿನ ಅಪಾಯದ ರೋಗಿಗಳಿಗೆ ಪೂರ್ಣ ಕಿಟ್ ನ ಅಗತ್ಯವಿದ್ದರೆ, ಮಧ್ಯಮ ಅಪಾಯದ ರೋಗಿಗಳಿಗೆ ಮುಖವಾಡ ಮತ್ತು ಕೈಗವಸುಗಳು ಸಾಕಷ್ಟಿವೆ. ಇನ್ನೂ ಪಿಪಿಇಯ ಸಾಕಷ್ಟು ಪ್ರಮಾಣವನ್ನು ಸಂಗ್ರಹಿಸಿ ಅವುಗಳನ್ನು ರಾಜ್ಯ ಸರ್ಕಾರಗಳಿಗೆ ಒದಗಿಸಿದ್ದೇವೆ. ಅದರ ಸೂಕ್ತ ಬಳಕೆಯಾಗಬೇಕು ಎಂದು ಅಗರ್ವಾಲ್ ಹೇಳಿದರು